ಗರ್ಭಪಾತ ಎನ್ನುವ ಶಬ್ಧವೇ ಭಯ ಹುಟ್ಟಿಸುತ್ತದೆ. ಯಾರಿಗೆ ಆಗಲಿ ಈ ರೀತಿಯಾಗಿ ನೋವು ತಿನ್ನುವುದು ಸಣ್ಣ ವಿಷಯ ಅಲ್ಲವೇ ಅಲ್ಲ. ಆದರೆ ಕೆಲವರಲ್ಲಿ ಪದೇ ಪದೇ ಗರ್ಭಪಾತವಾಗುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದಾದರೂ ಕೂಡ ಇದನ್ನು ನಿರ್ಲಕ್ಷ್ಯ ಮಾಡಬಾರದು. ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈ ಸ್ಟೋರಿಯನ್ನು ತಪ್ಪದೆ ಓದಿ. ಅನೇಕ ಭಾರಿ ಗರ್ಭಪಾತ ಆಗುವುದಕ್ಕೆ ಕಾರಣವೇನು? ಈ ಬಗ್ಗೆ ವೈದ್ಯರ ಅಭಿಪ್ರಾಯ ತಿಳಿದುಕೊಂಡು ಅದನ್ನು ತಡೆಯುವ ಮಾರ್ಗಗಳ ಬಗ್ಗೆ ಅರ್ಥಮಾಡಿಕೊಳ್ಳಿ.
ಮಗುವನ್ನು ಹೊತ್ತು, ಹೆರುವುದೇ ಒಂದು ಸಂಭ್ರಮ. ಆದರೆ ಒಮ್ಮೆ ಗರ್ಭ ಧರಿಸಿದ ಮೇಲೆ ಗರ್ಭಪಾತವಾದರೆ ಅದಕ್ಕಿಂತ ದುಃಖ ಬೇರೆ ಇಲ್ಲ. ಮಕ್ಕಳು ಹುಟ್ಟಿದಾಗ ಎಷ್ಟು ಸಂಭ್ರಮವಿರುತ್ತದೆಯೋ, ಮುಖವನ್ನೇ ನೋಡಿರದ ಆ ಜೀವ ಹುಟ್ಟುವುದೇ ಇಲ್ಲ ಎಂದಾಗ ಅದರ ಹತ್ತರಷ್ಟು ದುಃಖವಾಗುತ್ತದೆ. ಅದಲ್ಲದೆ ಮಹಿಳೆಗೆ ಒಮ್ಮೆ ಗರ್ಭಪಾತವಾಗುವುದು ಸಾಮಾನ್ಯ ಆದರೆ ಅದು ಪದೇ ಪದೇ ಕಂಡುಬಂದರೆ ಅದು ನಿರ್ಲಕ್ಷ್ಯ ಮಾಡುವ ವಿಷಯವಲ್ಲ. ಆರೋಗ್ಯ ತಜ್ಞರು ಹೇಳುವ ಪ್ರಕಾರ, ಇದೊಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು ಈ ರೀತಿಯಾದಾಗ ವೈದ್ಯರನ್ನು ಸಂಪರ್ಕ ಮಾಡಿ ಸೂಕ್ತ ಕಾರಣಗಳನ್ನು ಪತ್ತೆ ಹಚ್ಚಬೇಕಾಗುತ್ತದೆ. ಹಾಗಾದರೆ ಅನೇಕ ಭಾರಿ ಗರ್ಭಪಾತ ಆಗುವುದಕ್ಕೆ ಕಾರಣವೇನು?
ಗರ್ಭಪಾತಕ್ಕೆ ಹಲವಾರು ಕಾರಣಗಳಿದ್ದು ಉದಾಹರಣೆಗೆ, ಕೆಲವು ಮಹಿಳೆಯರಲ್ಲಿ, ಪ್ರೊಜೆಸ್ಟರಾನ್ ಅಥವಾ ಇನ್ಸುಲಿನ್‌ನಂತಹ ಹಾರ್ಮೋನುಗಳ ಅಸಮತೋಲನವು ಗರ್ಭಪಾತಕ್ಕೆ ಕಾರಣವಾಗಬಹುದು. ಕೆಲವೊಮ್ಮೆ, ಮಹಿಳೆ ಅಥವಾ ಪುರುಷನ ವರ್ಣತಂತುಗಳಲ್ಲಿನ ದೋಷವು ಕೂಡ ಭ್ರೂಣದ ಬೆಳವಣಿಗೆಯನ್ನು ತಡೆಯಬಹುದು. ಮಾತ್ರವಲ್ಲ ಮೂತ್ರನಾಳ ಅಥವಾ ಸಂತಾನೋತ್ಪತ್ತಿ ಪ್ರದೇಶದ ಸೋಂಕುಗಳು ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತವೆ.
ಡಾ. ಸಲೋನಿ ತಿಳಿಸಿರುವ ಮಾಹಿತಿ ಅನುಸಾರ, ಗರ್ಭಪಾತವಾಗಲು ಕ್ರೋಮೋಸೋಮಲ್ ಅಸಹಜತೆಯೂ ಕೂಡ ಒಂದು ಪ್ರಮುಖ ಕಾರಣವಾಗಿರಬಹುದು. ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ (13 ವಾರಗಳ ವರೆಗೆ) ಸಂಭವಿಸುವ ಸುಮಾರು 50% ಗರ್ಭಪಾತಗಳಿಗೆ ಕ್ರೋಮೋಸೋಮಲ್ ಅಸಹಜತೆಯೂ ಕಾರಣವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಈ ಕ್ರೋಮೋಸೋಮ್‌ಗಳು ನಿಮ್ಮ ದೇಹದ ಜೀವಕೋಶಗಳಲ್ಲಿ ಇರುವ ಸಣ್ಣ ರಚನೆಗಳಾಗಿದ್ದು ಅವುಗಳಲ್ಲಿ ನಿಮ್ಮ ಜೀನ್‌ಗಳಿರುತ್ತದೆ. ಹಾಗಾಗಿ ಜೀನ್‌ನಲ್ಲಿನ ಯಾವುದೇ ಅಸಹಜತೆಯು ಕೂಡ ಗರ್ಭಪಾತಕ್ಕೆ ಕಾರಣವಾಗಬಹುದು. ಡಾ. ಸಲೋನಿ ಅವರ ಪ್ರಕಾರ, 20 ವರ್ಷ ವಯಸ್ಸಿನ ಮಹಿಳೆಯರಿಗೆ ಗರ್ಭಪಾತದ ಅಪಾಯವು 12% ರಿಂದ 15% ರಷ್ಟು ಇದ್ದು 40 ರ ವಯಸ್ಸಿಗೆ ಇದು ಸುಮಾರು 25% ನಷ್ಟು ಹೆಚ್ಚಾಗುತ್ತದೆ ಎಂಬುದು ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಮಾತ್ರವಲ್ಲ ಈಗಾಗಲೇ ಒಮ್ಮೆ ಗರ್ಭಪಾತವಾಗಿದ್ದರೆ ಮತ್ತೊಂದು ಗರ್ಭಪಾತವಾಗುವ ಸಾಧ್ಯತೆ ಕೂಡ 25% ಹೆಚ್ಚಾಗಿರುತ್ತದೆ. ಹಾಗಾದರೆ ಗರ್ಭಪಾತವಾಗುವ ಮುನ್ನ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ ಅದನ್ನು ಹೇಗೆ ತಡೆಗಟ್ಟಬೇಕು ಎಂಬುದನ್ನು ತಿಳಿದುಕೊಳ್ಳಿ.
ಗರ್ಭಪಾತದ ಲಕ್ಷಣಗಳು ಯಾವುವು?
- ಯೋನಿ ರಕ್ತಸ್ರಾವ. ಇದು ತಿಳಿ ಕಂದು ಬಣ್ಣ ಅಥವಾ ತೀವ್ರ ಕೆಂಪು ಬಣ್ಣದಲ್ಲಿರಬಹುದು
- ಸೆಳೆತ ಮತ್ತು ಹೊಟ್ಟೆ ನೋವು
- ಬೆನ್ನು ನೋವು, ಇದು ಸೌಮ್ಯದಿಂದ ತೀವ್ರವಾಗಿರಬಹುದು
- ರಕ್ತ ಹೆಪ್ಪುಗಟ್ಟಿದ ರೀತಿ ರಕ್ತಸ್ರಾವವಾಗುವುದು
ಗರ್ಭಪಾತವನ್ನು ತಡೆಯಲು ಸಲಹೆಗಳು:
- ಗರ್ಭಧಾರಣೆಗೆ ಮೊದಲು ಸಂಪೂರ್ಣ ದೇಹದ ತಪಾಸಣೆ ಮಾಡಿಸಿ (ಥೈರಾಯ್ಡ್, ಸಕ್ಕರೆ, ಹಾರ್ಮೋನುಗಳು, ಸೋಂಕು ಪರೀಕ್ಷೆಗಳು).
- ಸಾಕಷ್ಟು ಪ್ರಮಾಣದಲ್ಲಿ ಫೋಲಿಕ್ ಆಮ್ಲ, ಕಬ್ಬಿಣ ಮತ್ತು ವಿಟಮಿನ್ ಡಿ ಇರುವ ಆಹಾರಗಳನ್ನು ಸೇವನೆ ಮಾಡಿ.
- ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.
- ಧೂಮಪಾನ, ಮದ್ಯಪಾನ ಅಥವಾ ಕೆಫೀನ್ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಿ.
For More Updates Join our WhatsApp Group :




