ದಕ್ಷಿಣ ಲೆಬನಾನ್: ದಕ್ಷಿಣ ಲೆಬನಾನ್ನಲ್ಲಿರುವ ಪ್ಯಾಲೆಸ್ತೀನಿಯರ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಹಲವು ಮಂದಿ ಗಾಯಗೊಂಡಿದ್ದಾರೆ. ಒಂದು ವರ್ಷದ ಹಿಂದೆ ಇಸ್ರೇಲ್-ಹಿಜ್ಬುಲ್ಲಾ ನಡುವೆ ಕದನ ವಿರಾಮದ ನಂತರ ಲೆಬನಾನ್ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.
ಕರಾವಳಿ ನಗರ ಸಿಡಾನ್‌ನ ಹೊರವಲಯದಲ್ಲಿರುವ ಐನ್ ಎಲ್-ಹಿಲ್ವೆ ನಿರಾಶ್ರಿತರ ಶಿಬಿರದಲ್ಲಿರುವ ಮಸೀದಿಯ ಪಾರ್ಕಿಂಗ್ ಸ್ಥಳದಲ್ಲಿ ಡ್ರೋನ್ ದಾಳಿ ನಡೆದಿದೆ. ಇಸ್ರೇಲ್ ಮತ್ತು ಅದರ ಸೈನ್ಯದ ವಿರುದ್ಧ ದಾಳಿಗೆ ಸಿದ್ಧತೆ ನಡೆಸುತ್ತಿದ್ದ ಹಮಾಸ್ ತರಬೇತಿ ಆವರಣದ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಹಮಾಸ್ ಗುಂಪು ಎಲ್ಲೆಲ್ಲಿ ಕಾರ್ಯನಿರ್ವಹಿಸುತ್ತಿದೆಯೋ ಅಲ್ಲೆಲ್ಲಾ ಅದರ ವಿರುದ್ಧ ಇಸ್ರೇಲ್ ಸೇನೆಯು ಕಾರ್ಯಾಚರಣೆ ಮುಂದುವರಿಸಲಿದೆ ಎಂದು ಅದು ಹೇಳಿದೆ.
ಕಳೆದ ಎರಡು ವರ್ಷಗಳಲ್ಲಿ, ಲೆಬನಾನ್ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಉಗ್ರಗಾಮಿ ಹಿಜ್ಬುಲ್ಲಾ ಗುಂಪಿನ ಹಲವಾರು ಅಧಿಕಾರಿಗಳು ಹಾಗೂ ಹಮಾಸ್‌ನ ಸದಸ್ಯರು ಸಾವನ್ನಪ್ಪಿದ್ದಾರೆ. ಜನವರಿ 2, 2024 ರಂದು ಬೈರುತ್‌ನ ದಕ್ಷಿಣ ಉಪನಗರದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಹಮಾಸ್‌ನ ಮುಖ್ಯಸ್ಥ ಮತ್ತು ಗುಂಪಿನ ಮಿಲಿಟರಿ ವಿಭಾಗದ ಸಂಸ್ಥಾಪಕ ಸಲೇಹ್ ಅರೌರಿ ಕೊಲ್ಲಲ್ಪಟ್ಟಿದ್ದರು.
ಅಂದಿನಿಂದ ಹಲವಾರು ಇತರ ಹಮಾಸ್ ಅಧಿಕಾರಿಗಳು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಅಕ್ಟೋಬರ್ 7, 2023 ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದರು. ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಇದು ಕಾರಣವಾಯಿತು, ಇದು ಹತ್ತಾರು ಸಾವಿರ ಪ್ಯಾಲೆಸ್ತೀನಿಯರನ್ನು ಕೊಂದಿತ್ತು ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.
For More Updates Join our WhatsApp Group :
