ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನವಿಲು ಗರಿಯುಳ್ಳ ಮುತ್ತಿನ ಪೇಟವನ್ನು ಧರಿಸಿದ ಹಿಂದೆ ಒಂದು ಸುಂದರ ಕಥೆಯಿದೆ. ಮೋದಿ ಮುಡಿಗೇರಿದ ಅಂದದ ಪೇಟವನ್ನು ಕಲ್ಪತರು ನಾಡಿನ ಮಹಿಳೆ ತಯಾರು ಮಾಡಿದ್ದು ಎಂಬುದೇ ನಮಗೆಲ್ಲರಿಗೂ ಹೆಮ್ಮೆಯ ವಿಚಾರ.
ಉಡುಪಿಗೆ ಪ್ರಧಾನಿ ಭೇಟಿಯ ಎರಡು ದಿನಗಳ ಹಿಂದೆಯಷ್ಟೇ ತರಾತುರಿಯಲ್ಲಿ ತುಮಕೂರಿನ ಉಷಾ ಭಾಸ್ಕರ್ ತಯಾರಿಸಿಕೊಟ್ಟ ಪೇಟ ಬೇಡವೆಂದಿದ್ದರೂ ಪರ್ಯಾಯ ಶ್ರೀಗಳ ಆಯ್ಕೆಯಂತೆ ಪ್ರಧಾನಿ ಮೋದಿ ಶಿರವನ್ನು ಅಲಂಕರಿಸಿದೆ. ಶ್ರೀಕೃಷ್ಣ ಮಠ, ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಲಕ್ಷ ಕಂಠ ಗೀತಾ ಪಾರಾಯಣ ವೇದಿಕೆಯಲ್ಲಿ ಪ್ರಧಾನಿ ಮೋದಿಯನ್ನು ನವಿಲು ಗರಿಯುಳ್ಳ ಮುತ್ತಿನ ಪೇಟ ತೊಡಿಸಿ ಗೌರವಿಸಲಾಗಿತ್ತು.
ನವಿಲು ಗರಿ ಬಳಸಿ, ಮುತ್ತುಗಳನ್ನು ಪೋಣಿಸಿ ಮಾಡಿದ್ದ ಆ ವಿಶೇಷ ಪೇಟ ಎಲ್ಲರ ಗಮನ ಸೆಳೆದಿತ್ತು. ತುಮಕೂರು ನಗರದ ಚಿಕ್ಕಪೇಟೆಯ ನಿವಾಸಿ ಉಷಾ ಭಾಸ್ಕರ್ ಅವರು ಸುಂದರವಾಗಿ ಸಿದ್ಧಪಡಿಸಿದ್ದ ಪೇಟ ಮೋದಿ ಅವರಿಗೆ ಮುಡಿಗೇರಿಸಲು ಉಡುಪಿಗೆ ತಲುಪಿತ್ತು. ಉಡುಪಿಯ ವಿಷ್ಣು ಫ್ಲವರ್ ಸ್ಟಾಲ್ ಅಂಗಡಿಯವರು ಪ್ರಧಾನಿ ಅವರಿಗಾಗಿ ಒಂದು ಸುಂದರ ಪೇಟವನ್ನು ಸಿದ್ಧಪಡಿಸಿ ಕೊಡುವಂತೆ ತುಮಕೂರಿನ ಉಷಾ ಅವರಿಗೆ ಮನವಿ ಮಾಡಿದ್ದರು. ಹೀಗಾಗಿ ಉಷಾ ಅವರು ಮೋದಿ ಅವರಿಗಾಗಿ ವಿಶೇಷ ಪೇಟ ತಯಾರಿಸಿ, ಕಳುಹಿಸಿದ್ದರು. ಆರಂಭದಲ್ಲಿ ಉಷಾ ಭಾಸ್ಕರ್ ತಯಾರಿಸಿದ್ದ ಪೇಟ ಮೋದಿ ಅವರಿಗೆ ತೊಡಿಸಲು ಆಯ್ಕೆಯಾಗಿರಲಿಲ್ಲ. ಆದರೆ, ಕೊನೆ ಘಳಿಗೆಯಲ್ಲಿ ಆಯ್ಕೆಯಾಗಿ ಮೋದಿ ಅವರ ಮುಡಿಗೇರಿದ್ದು ಉಷಾ ಭಾಸ್ಕರ್ ಅವರಿಗೆ ಖುಷಿ ತಂದಿದೆ.
ಜರಿ ಪೇಟಕ್ಕೆ ಲೇಸ್ ಜೋಡಿಸಿ, ಪುರಿ ಜಗನ್ನಾಥನ ಸನ್ನಿಧಿಯಿಂದ ತಂದ ಮುತ್ತುಗಳನ್ನು ಪೋಣಿಸಿ, ಪೆಂಡೆಂಟ್ ಅಳವಡಿಸಿ, ತೃಪ್ತಿ ಸಿಗುವ ತನಕ ಉಷಾ ತಮ್ಮ ಕರಕುಶಲ ಕೌಶಲ್ಯವನ್ನು ಪ್ರಯೋಗಿಸಿದ್ದರು. 4,000 ರೂ. ವೆಚ್ಚವಾಗಿದ್ದು, ಪ್ರಧಾನಿ ಶಿರವೇರಿದ್ದು ಖುಷಿ ಕೊಟ್ಟಿದೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH
