14 ಕಿ.ಮೀ ಕಾಲ್ನಡಿಗೆಯಲ್ಲೂ ಶಾಲೆಗೆ ಹೋಗಲು ಭಯ.
ಚಾಮರಾಜನಗರ : ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡಾನೆ,ಚಿರತೆ, ಹುಲಿಗಳ ಕಾಟ ಹೆಚ್ಚಾಗಿದ್ದು, ಹಲವಾರು ಸಾವು ನೋವುಗಳು ಸಂಭವಿಸಿವೆ. ಹೀಗಿರುವಾಗ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳಿಗೆ ರಸ್ತೆಯಲ್ಲಿ ಓಡಾಡುವುದಕ್ಕೂ ಭಯ ಶುರುವಾಗಿದೆ. ಈ ಕಾರಣ ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ಮಂಜುನಾಥಗೆ ಪತ್ರ ಬರೆದು ಸುರಕ್ಷತೆ ಒದಗಿಸುವಂತೆ ವಿನಂತಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಪತ್ರದಲ್ಲೇನಿದೆ?
ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಮ್ಮ ದಯನೀಯ ಸ್ಥಿತಿ ಹೇಳಿಕೊಂಡಿರುವ ವಿದ್ಯಾರ್ಥಿಗಳು, ನಮ್ಮ ಗ್ರಾಮದಲ್ಲಿ ರಸ್ತೆ ವ್ಯವಸ್ಥೆ ಸರಿಯಿಲ್ಲ. ಕಾಡಾನೆ, ಚಿರತೆ ಮತ್ತು ಹುಲಿಯಂತಹ ಪ್ರಾಣಿಗಳು ರಸ್ತೆಯಲ್ಲಿಯೇ ಸಂಚರಿಸುತ್ತಿರುತ್ತವೆ. ನಾವು ದಿನ ನಿತ್ಯ ಶಾಲಾ- ಕಾಲೇಜುಗಳಿಗೆ ಹೋಗಲು ಸುಮಾರಯ 14 ಕಿ.ಮೀ ನಡೆಯಬೇಕು. ನಮಗೆ ಶಾಲಾ ವಾಹನ ಅಥವಾ ಬಸ್ಸಿನ ವ್ಯವಸ್ಥೆಯೂ ಇಲ್ಲದ ಕಾರಣ ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅವರ ಕಷ್ಟ ಪರಿಹರಿಸಲು ಬಸ್ ಅಥವಾ ವ್ಯಾನ್ನ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಕೇಳಿಕೊಂಡಿದ್ದಾರೆ. ಜೀವ ಹಾನಿಯ ಅಪಾಯವಿರುವುದರಿಂದ ಆದಷ್ಟು ಬೇಗ ರಸ್ತೆ ಡಂಬೀಕರಣ ಮಾಡಿ, ಬಸ್ ಸಂಚಾರ ಒದಗಿಸುವಂತೆ ವಿನಂತಿಸಿಕೊಂಡಿದ್ದಾರೆ.
ಗಡಿ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಕಾಟ
ತಮಿಳುನಾಡಿನ ಗಡಿ ಪ್ರದೇಶಗಳಲ್ಲಿ 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡುಬಿಟ್ಟಿರುವುದು ಚಾಮರಾಜನಗರದ ಜನರ ಭೀತಿ ಹೆಚ್ಚಿಸಿದೆ. ಚಿರತೆಗಳು, ಹುಲಿಗಳ ಕಾಟದಿಂದ ಪೀಡಿತರಾದ ಗ್ರಾಮಸ್ಥರು ಮನೆಯಿಂದ ಹೊರಬರುವ ಪರಿಸ್ಥಿತಿಯೂ ಎದುರಾಗಿತ್ತು. ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿ ಮನಷ್ಯರ ಮೇಲೆ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಇದಕ್ಕೆ ಕಡಿವಾಳ ಹಾಕಲು ಮಾನವನ ಮುಖವಾಡವನ್ನು ಧರಿಸುವಂತೆ ಅರಣ್ಯ ಇಲಾಖೆ ಸೂಚಿಸಿತ್ತು.
For More Updates Join our WhatsApp Group :

