ನೆಲಮಂಗಲದಲ್ಲಿ 25 ಕೋಟಿ ರೂ. ಜಮೀನು ಪರಭಾರೆ ಆರೋಪ.
ನೆಲಮಂಗಲ: ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸುವ ಭೂಗಳ್ಳತನದ ಭಾರೀ ಪ್ರಕರಣ ನೆಲಮಂಗಲ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ವಂಚಕರನ್ನು ಸೆರೆ ಹಿಡಿಯಬೇಕಿದ್ದ ಆರಕ್ಷಕನ ವಿರುದ್ಧವೇ ಭೂಗಳ್ಳತನದ ಆರೋಪ ಕೇಳಿ ಬಂದಿದ್ದು, ನೆಲಮಂಗಲ ಗ್ರಾಮಾಂತರ ಠಾಣೆಯ ಹೆಡ್ ಕಾನ್ಸಟೇಬಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸಸ್ಪೆಂಡ್ ಆಗಿ ಮನೆಲ್ಲಿದ್ದರೂ ಬುದ್ದಿ ಕಲಿಯದ ಆಸಾಮಿ
ಹೆಡ್ ಕಾನ್ಸಟೇಬಲ್ ಗಿರಿಜೇಶ್ ಜೊತೆಗೆ ಮನೋಜ್, ರೋಹಿಣಿ ಸೇರಿದಂತೆ ಇನ್ನೂ ಹಲವರ ವಿರುದ್ಧವೂ ಭೂಗಳ್ಳತನದ ಪ್ರಕರಣ ದಾಖಲಾಗಿದ್ದು, ಸುಮಾರು 25 ಕೋಟಿ ರೂ. ಮೌಲ್ಯದ ಭೂಮಿ ಲಪಟಾಯಿಸಿದ ಆರೋಪ ಕೇಳಿಬಂದಿದೆ. ಈ ಹಿಂದೆಯೂ ಗಿರಿಜೇಶ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಸಸ್ಪೆಂಡ್ ಆಗಿ ಮನೆಲ್ಲಿದ್ದರೂ ಬುದ್ದಿ ಕಲಿಯದ ಆಸಾಮಿ, ಭೂ ಮಾಲೀಕರಿಗೆ ತಿಳಿಯದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ತನ್ನ ಹಾಗೂ ಸಹಚರರ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
25 ಕೋಟಿ ರೂ. ಮೌಲ್ಯದ 8 ಎಕರೆ ಜಮೀನು ಪರಭಾರೆ
ನೆಲಮಂಗಲ ತಾಲೂಕು ಸೋಂಪುರ ಹೋಬಳಿ, ಮಾಚನಹಳ್ಳಿ ಗ್ರಾಮದಲ್ಲಿರುವ ಥ್ಯಾಂಪಿ ಮ್ಯಾಥ್ಯೂ ಅವರಿಗೆ ಸೇರಿದ 8 ಎಕರೆ ಜಮೀನನ್ನು ಅವರಿಗೆ ತಿಳಿಯದೆ ಮೂರ್ನಾಲ್ಕು ಜನರ ಮೂಲಕ ರಿಜಿಸ್ಟರ್ ಮಾಡಲಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಈ ಜಮೀನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ( KIADB) ಸೇರಿದ್ದು, ಅದರ ಪರಿಹಾರ ಹಣ ಲಪಟಾಯಿಸಲು ಗಿರಿಜೇಶ್ ಯೋಜನೆ ರೂಪಿಸಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ರಿಜಿಸ್ಟರ್ ಆಗದೇ ಇದ್ದರೂ ದಾಖಲೆಗಳಲ್ಲಿ ಗಿರಿಜೇಶ್ ಹಾಗೂ ಇನ್ನಿಬ್ಬರ ಹೆಸರುಗಳಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಸಂಬಂಧ ಥ್ಯಾಂಪಿ ಮ್ಯಾಥ್ಯೂ ನೀಡಿದ ದೂರಿನ ಮೇರೆಗೆ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
For More Updates Join our WhatsApp Group :




