ಚಳಿಗಾಲದಲ್ಲಿ ಹಸಿ ಬಟಾಣಿ ಸೂಪರ್‌ಫುಡ್.
ಚಳಿಗಾಲದಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ತರಕಾರಿಗಳು ಬಂದಿರುತ್ತದೆ. ಅವುಗಳಲ್ಲಿ ಹಸಿ ಬಟಾಣಿಯೂ ಒಂದು. ಇವು ಸುಲಭವಾಗಿ ಲಭ್ಯವಿದ್ದು ಇದನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ ಏಕೆಂದರೆ ಇವುಗಳಲ್ಲಿ ಪ್ರೋಟೀನ್, ಫೈಬರ್ ಮತ್ತು ವಿವಿಧ ರೀತಿಯ ವಿಟಮಿನ್‌ಗಳಿರುತ್ತವೆ. ಅಷ್ಟೇ ಅಲ್ಲ, ಆರೋಗ್ಯ ತಜ್ಞರು ಹೇಳುವ ಪ್ರಕಾರ, ಹಸಿರು ಬಟಾಣಿ ತಿನ್ನುವುದರಿಂದ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳಿವೆ. ಅವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರಿಂದ ಹಿಡಿದು ಹೃದಯದ ಆರೋಗ್ಯವನ್ನು ಸುಧಾರಿಸಲು ಕೂಡ ಸಹಾಯ ಮಾಡುತ್ತದೆ. ಆದ್ದರಿಂದ, ಚಳಿಗಾಲದಲ್ಲಿ ಹಸಿರು ಬಟಾಣಿ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳೇನು, ಯಾವ ರೀತಿಯ ಸಮಸ್ಯೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಬಟಾಣಿಗಳನ್ನು ಯಾಕೆ ಸೇವನೆ ಮಾಡಬೇಕು?
ಹಸಿರು ಬಟಾಣಿಗಳು ವಿವಿಧ ರೀತಿಯ ಪೌಷ್ಟಿಕಾಂಶಗಳನ್ನು ಹೊಂದಿದ್ದು. ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ, ಫೋಲೇಟ್, ಫೈಬರ್, ಮೆಗ್ನೀಸಿಯಮ್, ರಂಜಕ ಮತ್ತು ಪೊಟ್ಯಾಸಿಯಮ್‌ನಂತಹ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದಲ್ಲದೆ, ಅವು ಸಾಕಷ್ಟು ಪ್ರಮಾಣದ ಪ್ರೋಟೀನ್ ಅನ್ನು ಕೂಡ ಹೊಂದಿರುತ್ತವೆ. ಅಷ್ಟೇ ಅಲ್ಲ, ಬಟಾಣಿಗಳಲ್ಲಿ ಅಮೈನೋ ಆಮ್ಲಗಳಿದ್ದು ಸಸ್ಯಾಹಾರಿಗಳಿಗೆ ಒಳ್ಳೆಯುದು. ಆದ್ದರಿಂದ, ಪ್ರತಿದಿನ ಬಟಾಣಿ ಸೇವನೆ ಮಾಡುವ ಮೂಲಕ ಪ್ರೋಟೀನ್ ಕೊರತೆಯನ್ನು ನೀಗಿಸಿಕೊಳ್ಳಬಹುದು.
ಯಾವ ಕಾಯಿಲೆಗೆ ಹೇಗೆ ಪ್ರಯೋಜನಕಾರಿ?
ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಹಸಿ ಬಟಾಣಿಗಳು ಪೊಟ್ಯಾಸಿಯಮ್ ನಿಂದ ಸಮೃದ್ಧವಾಗಿದ್ದು ಫೈಬರ್ ಅನ್ನು ಒದಗಿಸುತ್ತವೆ, ಅಷ್ಟು ಮಾತ್ರವಲ್ಲ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ಮೂಳೆ ದುರ್ಬಲವಾಗುವುದನ್ನು ತಡೆಯುತ್ತದೆ: ಬಟಾಣಿಗಳು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ವಿಟಮಿನ್ ಕೆ ಅನ್ನು ಹೊಂದಿದ್ದು, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ವಯಸ್ಸಾದಂತೆ ಮೂಳೆಗಳು ದುರ್ಬಲಗೊಳ್ಳುವುದನ್ನು ಇದು ಕಡಿಮೆ ಮಾಡುತ್ತದೆ.
ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿ: ಬಟಾಣಿಗಳು ಫೈಬರ್ ಅಂಶದಿಂದ ಸಮೃದ್ಧವಾಗಿದ್ದು, ಜೀರ್ಣಕ್ರಿಯೆಗೆ ಒಳ್ಳೆಯದು. ಪ್ರತಿದಿನ ಬಟಾಣಿ ತಿನ್ನುವುದರಿಂದ ಹೊಟ್ಟೆಗೆ ಸಂಬಂಧಿಸಿದ ವಿವಿಧ ರೀತಿಯ ಸಮಸ್ಯೆಗಳು ಕಡಿಮೆಯಾಗುತ್ತದೆ.
ತೂಕ ಇಳಿಕೆಗೆ ಸಹಕಾರಿ: ಬಟಾಣಿಗಳು ಫೈಬರ್ ಮತ್ತು ಪ್ರೋಟೀನ್ ಅಂಶದಿಂದ ಸಮೃದ್ಧವಾಗಿದ್ದು, ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಷ್ಟು ಮಾತ್ರವಲ್ಲ, ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತಹ ಭಾವನೆಯನ್ನು ನೀಡುತ್ತದೆ. ಇದರಿಂದ ಅತಿಯಾಗಿ ತಿನ್ನುವ ಅಭ್ಯಾಸಕ್ಕೆ ಮುಕ್ತಿ ಸಿಗುತ್ತದೆ ಮತ್ತು ತೂಕವನ್ನು ಒಂದೇ ರೀತಿಯಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಬಟಾಣಿಗಳು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ಆದರೆ, ಕೆಲವು ನಿರ್ದಿಷ್ಟ ಕಾಯಿಲೆ ಇರುವವರು ಯಾವುದೇ ರೀತಿಯ ಆಹಾರವನ್ನು ಟ್ರೈ ಮಾಡುವ ಮೊದಲು ತಜ್ಞರ ಸಲಹೆ ಪಡೆದುಕೊಳ್ಳಿ.
For More Updates Join our WhatsApp Group :




