ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ಅಡ್ಡಿ.
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಹೊಸ ಪಿಕ್ಅಪ್ ವ್ಯವಸ್ಥೆ ಟ್ಯಾಕ್ಸಿ ಚಾಲಕರಲ್ಲಿ ಅಸಮಾಧಾನ ಮೂಡಿಸಿದೆ. ಮಂಗಳವಾರ ವಿಮಾನ ನಿಲ್ದಾಣದ ಹೊರಗಿನ ರಸ್ತೆಗಳಲ್ಲಿ ಟ್ಯಾಕ್ಸಿಗಳು ತುಂಬಿದ್ದು, ಸಾದಹಳ್ಳಿ ಗೇಟ್ ಟೋಲ್ ಪ್ಲಾಜಾ ಬಳಿ ಸ್ವಲ್ಪ ಸಮಯ ಸಂಚಾರಕ್ಕೆ ಅಡ್ಡಿಯಾಗಿದೆ.
ಹೊಸ ಪಿಕ್ಅಪ್ ವ್ಯವಸ್ಥೆಗೆ ಚಾಲಕರ ಆಕ್ರೋಶ
ಹೊಸ ಪಿಕಪ್ ವ್ಯವಸ್ಥೆಯಿಂದ ಟ್ಯಾಕ್ಸಿ ಚಾಲಕರು ಮತ್ತು ಪ್ರಯಾಣಿಕರಿಬ್ಬರಿಗೂ ತೊಂದರೆಯಾಗುತ್ತಿದೆ ಎಂದು ಕರ್ನಾಟಕ ಚಾಲಕರ ಒಕ್ಕೂಟದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಒಕ್ಕೂಟದ ಸಂಸ್ಥಾಪಕ ಮತ್ತು ರಾಜ್ಯ ಅಧ್ಯಕ್ಷ ಜಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.ಕೆಲವು ಪ್ರತಿಭಟನಾಕಾರರು ವಿಮಾನ ನಿಲ್ದಾಣಕ್ಕೆ ಇತರ ಟ್ಯಾಕ್ಸಿಗಳು ಪ್ರವೇಶಿಸುವುದನ್ನು ತಡೆಯಲು ಪ್ರಯತ್ನಿಸಿದಾಗ ಪೊಲೀಸರು ಮಧ್ಯ ಪ್ರವೇಶಿಸಿ, ಲಾಠಿ ಪ್ರಹಾರ ಮಾಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ತರಲಾದ ಹೊಸ ಪಿಕ್ಅಪ್ ರೂಲ್ಸ್ ಪ್ರಕಾರ, ಖಾಸಗಿ ವಾಹನಗಳು ಟರ್ಮಿನಲ್ 1 ಮತ್ತು 2 ರಲ್ಲಿ ಗೊತ್ತುಪಡಿಸಿದ ಪಿಕ್-ಅಪ್ ವಲಯಗಳಲ್ಲಿ ಎಂಟು ನಿಮಿಷಗಳವರೆಗೆ ಉಚಿತವಾಗಿ ಕಾಯಬಹುದು. ಈ ಸಮಯ ಮೀರಿ ಉಳಿದುಕೊಳ್ಳುವ ವಾಹನಗಳು ದಂಡ ತೆತ್ತಬೇಕು. 8 ರಿಂದ 13 ನಿಮಿಷಗಳವರೆಗೆ 150 ರೂ., 13 ರಿಂದ 18 ನಿಮಿಷಗಳವರೆಗೆ 300 ರೂ.ಮತ್ತು 18 ನಿಮಿಷಗಳನ್ನು ಮೀರಿದವರ ವಾಹನಗಳನ್ನು ಪೊಲೀಸ್ ಠಾಣೆಗೆ ಎಳೆದೊಯ್ಯಲಾಗುವುದು.
ಟ್ಯಾಕ್ಸಿ ಚಾಲಕರಿಂದ ಪ್ರತಿಭಟನೆಯ ಎಚ್ಚರಿಕೆ
ಈ ರೂಲ್ಸ್ನಿಂದಾಗಿ ತಮ್ಮ ಸಂಪಾದನೆಗೆ ಅಡ್ಡಿಯಾಗುತ್ತಿದೆ ಎಂದು ಟ್ಯಾಕ್ಸಿ ಚಾಲಕರು ಆರೋಪಿಸುತ್ತಿದ್ದಾರೆ. ಇದನ್ನು ಸಮಾಲೋಚನೆ ಇಲ್ಲದೆ ಜಾರಿಗೆ ತರಲಾಗಿದೆ ಮತ್ತು ದೈನಂದಿನ ಆದಾಯಕ್ಕಾಗಿ ವಿಮಾನ ನಿಲ್ದಾಣದಲ್ಲಿನ ಗ್ರಾಹಕರನ್ನೇ ಅವಲಂಬಿಸಿರುವ ಚಾಲಕರಿಗೆ ಅನ್ಯಾಯವಾಗುತ್ತಿದೆ ಎಂದು ಚಾಲಕರು ಗೋಳಿಟ್ಟಿದ್ದಾರೆ. ಈ ಹೊಸ ನಿಯಮಾವಳಿಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಒಕ್ಕೂಟವು ಒತ್ತಾಯಿಸುವುದರ ಜೊತೆಗೆ, ಪ್ರತಿಭಟನೆಗಳ ಎಚ್ಚರಿಕೆ ನೀಡಿದೆ ಎಂದು ಹೇಳಲಾಗಿದೆ.
For More Updates Join our WhatsApp Group :



