ಪಂಚ್ ಡೈಲಾಗ್ ಹೊಡೆದ ನಟ ಅಡಿವಿಸೇಷ್.
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಈಗಾಗಲೇ ಘೋಷಿಸಿದ್ದಾರೆ ಯಶ್ ಮತ್ತು ತಂಡ. ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ‘ಟಾಕ್ಸಿಕ್’ ಬಿಡುಗಡೆ ದಿನಾಂಕ ಘೋಷಿಸಿದ ಕಾರಣ ಕೆಲವು ಸಿನಿಮಾಗಳು ತಮ್ಮ ಬಿಡುಗಡೆ ದಿನಾಂಕವನ್ನು ಬದಲಾಯಿಸಿಕೊಂಡಿವೆ. ಆದರೆ ತೆಲುಗಿನ ‘ಡಕೈತ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದು, ತಾವೂ ಸಹ ‘ಟಾಕ್ಸಿಕ್’ ಬಿಡುಗಡೆ ದಿನಾಂಕದಂದೆ ಚಿತ್ರಮಂದಿರಕ್ಕೆ ಬರುತ್ತಿರುವುದಾಗಿ ಘೋಷಿಸಿದ್ದಾರೆ.
‘ಡಕೈತ್’ ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಈ ಸಂದರ್ಭ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಡಿವಿಸೇಷ್ ಅವರಿಗೆ ಈ ಬಗ್ಗೆ ಪ್ರಶ್ನೆ ಎದುರಾಯ್ತು. ‘ಮಾರ್ಚ್ 19 ‘ಡಕೈತ್’ ಸಿನಿಮಾ ಬಿಡುಗಡೆಗೆ ಒಳ್ಳೆಯ ಸಮಯ ಅಲ್ಲವೇನೋ? ಅದೇ ದಿನ ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಸಹ ಬರುತ್ತಿವೆ. ಇಷ್ಟು ಪ್ಯಾಷನ್ನಿಂದ ಸಿನಿಮಾ ಮಾಡಿದ್ದೀರಿ, ಏಕೆ ಎರಡು ದೊಡ್ಡ ಸಿನಿಮಾಗಳ ನಡುವೆ ಬಿಡುಗಡೆ ಮಾಡುವ ನಿರ್ಣಯ ಮಾಡಿದ್ದೀರಿ’ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದಾರೆ.
ಉತ್ತರ ನೀಡಿರುವ ನಟ ಅಡಿವಿಸೇಷ್, ‘ಸ್ವಲ್ಪ ಹಳೆಯದ್ದನ್ನು ನೆನಪು ಮಾಡಿಕೊಳ್ಳಿ. 2023ರಲ್ಲಿ ನನ್ನ ನಟನೆಯ ‘ಮೇಜರ್’ ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿ ಯಶ್ ರಾಜ್ ಫಿಲಮ್ಸ್ ನಿರ್ಮಿಸಿ, ಅಕ್ಷಯ್ ಕುಮಾರ್ ನಟಿಸಿದ್ದ ‘ಪೃಥ್ವಿರಾಜ್’ ಸಿನಿಮಾ ಬಿಡುಗಡೆ ಆಗಿತ್ತು. ಅದೇ ಸಮಯದಲ್ಲಿ ಕಮಲ್ ಹಾಸನ್ ನಟನೆಯ ‘ವಿಕ್ರಂ’ ಸಿನಿಮಾ ಸಹ ಬಿಡುಗಡೆ ಆಗಿತ್ತು. ಆಗಲೂ ಇದೇ ಪ್ರಶ್ನೆಯನ್ನು ಕೇಳಲಾಗಿತ್ತು, ಆಗ ಕೊಟ್ಟಿದ್ದ ಉತ್ತರವನ್ನೇ ಈಗಲೂ ಕೊಡುತ್ತೇನೆ, ‘‘ಸಮುದ್ರದಲ್ಲಿ ಸಾಕಷ್ಟು ದೊಡ್ಡ ಮೀನುಗಳು ಇರಬಹುದು ಆದರೆ ನಾವು ಚಿನ್ನದ ಮೀನು (ಗೋಲ್ಡ್ ಫಿಶ್)’’ ಎಂದಿದ್ದಾರೆ.
ಆ ಮೂಲಕ ಎಷ್ಟೇ ದೊಡ್ಡ ಸಿನಿಮಾಗಳು ಬಂದರೂ ಸಹ ನಾವು ಗೆಲ್ಲುವುದು ಪಕ್ಕಾ ಎಂದಿದ್ದಾರೆ ಅಡಿವಿಸೇಷ್. ಅವರ ನಟನೆಯ ‘ಡಕೈತ್’ ಸಿನಿಮಾನಲ್ಲಿ ಮೃಣಾಲ್ ಠಾಕೂರ್ ನಾಯಕಿ. ಸಿನಿಮಾನಲ್ಲಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಕಾಶ್ ರೈ, ಸುನಿಲ್ ಅವರುಗಳು ಪ್ರಮುಖ ಪಾತ್ರದಲ್ಲಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಟೀಸರ್ ಗಮನ ಸೆಳೆದಿದೆ. ಸಿನಿಮಾ ಸಹ ಚೆನ್ನಾಗಿ ಇರುವಂತಿದೆ ಆದರೂ ಎರಡು ದೊಡ್ಡ ಸಿನಿಮಾಗಳ ನಡುವೆ ಬಿಡುಗಡೆ ಮಾಡುವುದು ಒಳ್ಳೆಯ ನಿರ್ಧಾರವೇ ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.
For More Updates Join our WhatsApp Group :




