ದೆಹಲಿಗೆ ‘ಸುದರ್ಶನ ಚಕ್ರ’ ಅಳವಡಿಕೆಗೆ ಕೇಂದ್ರ ಒಪ್ಪಿಗೆ.
ನವದೆಹಲಿ: ಮಿಲಿಟರಿ ನೆಲೆಗಳು, ಸಂಸತ್ ಭವನ, ರಾಷ್ಟ್ರಪತಿ ಭವನ ಇತ್ಯಾದಿ ಬಹಳ ಸೂಕ್ಷ್ಮವೆಂದು ಪರಿಗಣಿಸಲಾದ ಹಾಗೂ ಮೇಲ್ಭಾಗದಲ್ಲಿ ಹಾರಾಟ ನಿಷೇಧ ಮಾಡದ ಸ್ಥಳಗಳ ರಕ್ಷಣೆಗಾಗಿ ಭಾರತ ಸರ್ಕಾರ ‘ಸುದರ್ಶನ ಚಕ್ರ’ವನ್ನು ಅಳವಡಿಸುತ್ತಿದೆ. ಡಿಆರ್ಡಿಒ ಅಭಿವೃದ್ಧಿಪಡಿಸಿರುವ ಏಕೀಕೃತ ವಾಯು ರಕ್ಷಣಾ ಶಸ್ತ್ರ ವ್ಯವಸ್ಥೆಯನ್ನು (ಐಎಡಿಡಬ್ಲ್ಯುಎಸ್) 5,181 ಕೋಟಿ ರೂ ಖರೀದಿಸಲು ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಈ ಮಲ್ಟಿ ಲೇಯರ್ ವೆಪನ್ ಸಿಸ್ಟಂ ಅನ್ನು ದೆಹಲಿ ಎನ್ಸಿಆರ್ ಪ್ರದೇಶದಲ್ಲಿರುವ ವಿಐಪಿ-89 ವಲಯದ ಭದ್ರತೆಗೆ ನಿಯೋಜಿಸಲಾಗುತ್ತದೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.
ಏಕೀಕೃತ ವಾಯು ರಕ್ಷಣಾ ಶಸ್ತ್ರ ವ್ಯವಸ್ಥೆಯನ್ನು ಡಿಆರ್ಡಿಒ ಅಭಿವೃದ್ಧಿಪಡಿಸಿದೆ. ಏರ್ ಫೋರ್ಸ್ ಕೇಂದ್ರಿತ ಸಿಸ್ಟಂ ಇದಾಗಿದ್ದು, ಒಂದು ಸ್ಥಳಕ್ಕೆ ಬಹು ಎಳೆಗಳಲ್ಲಿ ರಕ್ಷಣೆ ಕೊಡಬಲ್ಲುದು. ದೆಹಲಿಯ ವಿಐಪಿ-89 ಝೋನ್ ರಕ್ಷಣೆಗೆಂದು ಸದ್ಯ ಒಂದು ಸಿಸ್ಟಂ ಅನ್ನು ತರಿಸಲಾಗುತ್ತಿದೆ. ಇದು ದೆಹಲಿಯ ಸುತ್ತಮುತ್ತಲ 30 ಕಿಮೀ ಶ್ರೇಣಿವರೆಗಿನ ಪ್ರದೇಶಕ್ಕೆ ರಕ್ಷಣೆ ಕೊಡುತ್ತದೆ. ಆಕಾಶದಿಂದ ಡ್ರೋನ್ ಆಗಲೀ, ಮಿಸೈಲ್ ಆಗಲಿ ಯಾವುದೇ ದಾಳಿಯಾದರೂ ಇದು ತಡೆಯಬಲ್ಲುದು. ಒಂದು ರೀತಿಯಲ್ಲಿ ಸುದರ್ಶನ ಚಕ್ರದ ರೀತಿಯಲ್ಲಿ ರಕ್ಷಣೆ ಕೊಡುತ್ತದೆ.
ಈ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ (2025ರ ಆಗಸ್ಟ್ 15) ಪ್ರಧಾನಿ ನರೇಂದ್ರ ಮೋದಿ ಅವರು ಮಿಷನ್ ಸುದರ್ಶನ ಚಕ್ರ ಘೋಷಿಸಿದ್ದರು. 2035ರ ವೇಳೆಗೆ ದೇಶದ ಪ್ರಮುಖ ಸ್ಥಳಗಳು ಮತ್ತು ನಗರಗಳಿಗೆ ಸಮಗ್ರ ಭದ್ರತಾ ವ್ಯವಸ್ಥೆ ನಿರ್ಮಿಸುವುದು ಈ ಮಿಷನ್ನ ಗುರಿ. ಇದರ ಭಾಗವಾಗಿ ಈಗ ಒಂದು ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಂ ಅನ್ನು ಖರೀದಿಸಿ ದೆಹಲಿಯ ರಕ್ಷಣೆಗೆ ನಿಯೋಜಿಸಲಾಗುತ್ತಿದೆ.
For More Updates Join our WhatsApp Group :




