ಎರಡು ದಿನಗಳಲ್ಲಿ 11 ಮಂಗಗಳು ಸಾ*.
ತುಮಕೂರು: ಒಂದು ತಿಂಗಳ ಹಿಂದೆಯಷ್ಟೇ ಬೆಳಗಾವಿಯಲ್ಲಿ 30 ಕೃಷ್ಣಮೃಗಗಳು ನಿಗೂಢವಾಗಿ ಸಾವನ್ನಪ್ಪಿರುವುದು ಆತಂಕ ಮೂಡಿಸಿತ್ತು. ಇದೀಗ ತುಮಕೂರಿನಲ್ಲಿಯೂ ಅಂತದ್ದೇ ಪ್ರಕರಣ ಬೆಳಕಿಗೆ ಬಂದಿದೆ. ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಕೇವಲ ಎರಡು ದಿನಗಳಲ್ಲಿ 11 ಮಂಗಗಳು ನಿಗೂಢವಾಗಿ ಮೃತಪಟ್ಟಿದ್ದು, ವಿಷಪ್ರಾಶನವಾಗಿರುವ ಶಂಕೆ ವ್ಯಕ್ತವಾಗಿದೆ.
ಮಂಗಗಳು ಯಾವುದೇ ಸೋಂಕಿನಿಂದ ಮೃತಪಟ್ಟಿಲ್ಲವೆಂಬುದು ದೃಢ
ದೇವರಾಯನದುರ್ಗ ಹಾಗೂ ದುರ್ಗದ ಹಳ್ಳಿ ನಡುವಿನ ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ದಿನಗಳಲ್ಲಿ ಮಂಗಗಳ ಮೃತದೇಹಗಳು ಪತ್ತೆಯಾಗಿವೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಒಂದರ ನಂತರ ಮತ್ತೊಂದರಂತೆ ಮಂಗಗಳ ಮೃತದೇಹಗಳು ಪತ್ತೆ ಮಾಡಿದ್ದಾರೆ. ಅರಣ್ಯ ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯದ ವೇಳೆ ಮೊದಲ ದಿನ ಏಳು ಮಂಗಗಳು, ಎರಡನೇ ದಿನ ನಾಲ್ಕು ಮಂಗಗಳ ಮೃತದೇಹಗಳು ಪತ್ತೆಯಾಗಿವೆ. ಪತ್ತೆಯಾದ ೧೧ ಮೃತದೇಹಗಳಲ್ಲಿ ಒಂಬತ್ತು ಸಾಮಾನ್ಯ ಮಂಗಗಳು ಹಾಗೂ ಎರಡು ಲಂಗೂರಗಳು ಎನ್ನಲಾಗಿದೆ. ಪ್ರಾಥಮಿಕ ಪರಿಶೀಲನೆಯಲ್ಲಿ ಮಂಗಗಳು ಯಾವುದೇ ಸೋಂಕು ಅಥವಾ ಕಾಯಿಲೆಯಿಂದ ಮೃತಪಟ್ಟಿಲ್ಲ ಎಂಬುದು ತಿಳಿದುಬಂದಿದೆ.
ಬೆಂಗಳೂರಿನ ಪಶು ವೈದ್ಯಕೀಯ ವಿದ್ಯಾಲಯಕ್ಕೆ ಸ್ಯಾಂಪಲ್ ರವಾನೆ
ಅರಣ್ಯಾಧಿಕಾರಿಗಳು ಸಾವಿನ ಕಾರಣ ಪತ್ತೆ ಹಚ್ಚಲು ಮುಂದಾಗಿ, ಊರ್ಡಿಗೆರೆಯ ಪಶು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪರೀಕ್ಷೆಯ ವೇಳೆ ಮಂಗಗಳ ಕರುಳಿನಲ್ಲಿ ಅನ್ನ ಪತ್ತೆಯಾಗಿದ್ದು, ವಿಷ ಪ್ರಾಶನದಿಂದ ಸಾವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇದನ್ನು ದೃಢಪಡಿಸಲು ಕೆಲವು ಮಾದರಿಗಳನ್ನು ಬೆಂಗಳೂರಿನ ಪಶು ವೈದ್ಯಕೀಯ ವಿದ್ಯಾಲಯ (IAH, VB)ಕ್ಕೆ ರವಾನೆ ಮಾಡಲಾಗಿದೆ. ಈ ಘಟನೆ ಸಂಬಂಧ ತುಮಕೂರು ಪ್ರಾದೇಶಿಕ ವಲಯದ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಮಂಗಗಳ ಸಾವಿನ ಹಿಂದಿರುವ ಕಾರಣ ಹಾಗೂ ದುಷ್ಕೃತ್ಯವಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
For More Updates Join our WhatsApp Group :




