ಕರ್ನಾಟಕ ಹವಾಮಾನ ಅಪ್ಡೇಟ್
ಬೆಂಗಳೂರು: ಇಂದು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ವಾತಾವರಣ ಸಾಮಾನ್ಯವಾಗಿ ಶುಷ್ಕ, ಬಿಸಿಲಿನ ವಾತಾವರಣವಿದ್ದು, ತುಂಬಾ ಪ್ರಶಾಂತವಾಗಿರಲಿದೆ. ಇಂದು ರಾತ್ರಿ ಚಳಿಯ ಮಟ್ಟ ಹೆಚ್ಚಾಗಬಹುದು. ತಾಪಮಾನವು ಸ್ವಲ್ಪ ಮಟ್ಟಿಗೆ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಯಿದೆ. ಹಗಲು ಬಿಸಿಲಿನಿಂದ ಕೂಡಿದ್ದು, ರಾತ್ರಿ ಗರಿಷ್ಠ ತಾಪಮಾನ 26°C ಮತ್ತು ಕನಿಷ್ಠ ತಾಪಮಾನ 14°C ಇರುತ್ತದೆ. ಇಂದು ಬೆಳಗಿನ ಜಾವ ಮಂಜು ಮತ್ತು ಮಬ್ಬು ಆವರಿಸಿದ್ದು, ಇದು ವಾಹನ ಸವಾರರ ಮೇಲೆ ಪರಿಣಾಮ ಬೀರಲಿದೆ.
ಇನ್ನು ಕರಾವಳಿ ಪ್ರದೇಶಗಳಾದ ಮಂಗಳೂರು, ಉಡುಪಿ ಭಾಗದಲ್ಲಿ ತಾಪಮಾನವು ಬೆಚ್ಚಗಿರುತ್ತದೆ, ಗರಿಷ್ಠ 28°C ಮತ್ತು 33°C ನಡುವೆ ಮತ್ತು ರಾತ್ರಿಯ ಕನಿಷ್ಠ 20°C ನಿಂದ 22°C ವರೆಗೆ ಇರುತ್ತದೆ . ಉತ್ತರ ಕರ್ನಾಟಕದ ಕಲಬುರ್ಗಿ, ಬೆಳಗಾವಿ ಭಾಗದಲ್ಲಿ ಸಾಮಾನ್ಯವಾಗಿ ವಾತಾವರಣವೂ ಶುಭ್ರವಾಗಿರುತ್ತದೆ, ಹಗಲಿನಲ್ಲಿ ಗರಿಷ್ಠ ತಾಪಮಾನ 19°C ನಿಂದ 20°C ವರೆಗೆ ಇರುತ್ತದೆ ಮತ್ತು ರಾತ್ರಿಗಳು ತಂಪಾಗಿರುತ್ತವೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
ರಾಜ್ಯದ ಬಯಲು ಪ್ರದೇಶಗಳಲ್ಲೇ ಧಾರವಾಡ, ಗದಗ ಮತ್ತು ಬೀದರ್‌ನಲ್ಲಿ ಕನಿಷ್ಠ ತಾಪಮಾನ 11.6°C ದಾಖಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಮುಂದಿನ 48 ಗಂಟೆಗಳಲ್ಲಿ ಇದೇ ರೀತಿಯ ಹವಾಮಾನ ಮುಂದುವರಿಯುವ ನಿರೀಕ್ಷೆಯಿದೆ, ತಾಪಮಾನವು ಇದೇ ರೀತಿ ಇರುತ್ತದೆ ಮತ್ತು ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ.
ಉತ್ತರ ಒಳನಾಡಿನಲ್ಲಿ ಶೀತಗಾಳಿ ಸಕ್ರಿಯವಾಗಿದೆ. ಬೀದರ್, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ಗದಗ ಸೇರಿದಂತೆ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-5°C ಕಡಿಮೆ ಇರಲಿದೆ ಎಂದು ಹೇಳಲಾಗಿದೆ.
For More Updates Join our WhatsApp Group :




