ಬಿಜೆಪಿ ಶಾಸಕಿಯ ನಕಲಿ ಶ್ರದ್ಧಾಂಜಲಿ ಪೋಸ್ಟ್ ವೈರಲ್
ಮಂಗಳೂರು: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯನ್ನ ಅರೆನಗ್ನಗೊಳಿಸಿ ಹಲ್ಲೆ ನಡೆಸಿರುವ ಪ್ರಕರಣ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೀಗಿರುವಾಗ ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಅವರ ನಕಲಿ ಶ್ರದ್ಧಾಂಜಲಿ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಕಲಿ ಪೋಸ್ಟ್ ಹರಿಬಿಟ್ಟಿದ್ದ ಆರೋಪಿ ಸಂದೇಶ್ ಅಲಿಯಾಸ್ ಸೀತಾರಾಮ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 352, ಬಿಎಸ್ಎಸ್ ಅಡಿ ಪ್ರಕರಣ ದಾಖಲಾಗಿದೆ.
ವೈರಲ್ ಪೋಸ್ಟ್ನಲ್ಲಿ ಏನಿದೆ?
ಬಿಲ್ಲವ ಸಂದೇಶ್ ಎಂದ ಫೇಸ್ ಬುಕ್ ಖಾತೆಯಲ್ಲಿ ಶ್ರದ್ಧಾಂಜಲಿ ಪೋಸ್ಟ್ ಹಾಕಲಾಗಿದೆ. ‘ದಲಿತ ಸಮುದಾಯ ಶಾಸಕಿ ಭಾಗೀರಥಿ ಮುರುಳ್ಳ ಇರುವ ಶೋಷಣೆಗೊಳಗಾದ ದಲಿತ ಸಮುದಾಯದ ಪರ ನಿಲ್ಲದೆ ಇಂದು ಎಲ್ಲರನ್ನೂ ಅಗಲಿ ತೆರಳಿದ್ದಾರೆ. ಇವರ ಅಗಲಿಕೆಯನ್ನು ಭರಿಸುವ ಶಕ್ತಿ ಬ್ಲೂಜೆಪಿ ಪಕ್ಷದ ಕಾರ್ಯಕರ್ತರಿಗೆ ದೇವರು ನೀಡಲಿ ಎಂದು ಹೇಳುತ್ತಾ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ’ ಎಂದು ಬರೆಯಲಾಗಿದೆ.
ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಂದೇಶ್ನನ್ನು ಬಂಧಿಸುವಂತೆ ತೀವ್ರ ಆಗ್ರಹ ಕೇಳಿಬಂದಿತ್ತು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದಿಂದ ದಕ್ಷಿಣ ಕನ್ನಡ ಎಸ್ಪಿಗೆ ದೂರು ನೀಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಪೊಲೀಸರು ತನಿಖೆ ನಡೆಸಿದ್ದಾರೆ.
ಇನ್ನು ಸುಳ್ಯ ಕ್ಷೇತ್ರದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಶೋಷಿತ ಸಮುದಾಯದಿಂದ ಬಂದಿದ್ದು, ಜನಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅವರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
For More Updates Join our WhatsApp Group :




