ಜೆಸಿಬಿ ಬಳಸಿ ಅಕ್ರಮವಾಗಿ ಕಾಂಪೌಂಡ್ ಧ್ವಂಸ ಆರೋಪ.
ಯಶ್ ಅವರ ತಾಯಿ ಪುಷ್ಪ ಅವರಿಗೆ ಸೇರಿದ್ದು ಎನ್ನಲಾಗುತ್ತಿರುವ ಹಾಸನದಲ್ಲಿರುವ ಸೈಟ್ನ ಕಾಂಪೌಂಡ್ ಅನ್ನು ಆ ಜಾಗದ ಸದ್ಯದ ಮಾಲೀಕರು ಎಂದು ಹೇಳಿಕೊಂಡಿರುವ ದೇವರಾಜ್ ಹೆಸರಿನ ವ್ಯಕ್ತಿಯೊಬ್ಬರು ಕೆಲ ದಿನಗಳ ಹಿಂದೆ ನೆಲಸಮಗೊಳಿಸಿದ್ದರು. ಆ ಬಗ್ಗೆ ಪುಷ್ಪ ಅವರ ಪರವಾಗಿ ಯಶ್ ಅವರ ಸಂಬಂಧಿ ದುರ್ಗಾಪ್ರಸಾದ್ ಅವರು ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕೆಲ ದಿನಗಳ ಹಿಂದೆ ದೂರು ಸಲ್ಲಿಸಿದ್ದರು. ಇದೀಗ ಸ್ವತಃ ಪುಷ್ಪ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸರೊಟ್ಟಿಗೆ ಘಟನೆ ಕುರಿತಾಗಿ ಮಾತುಕತೆ ನಡೆಸಿದ್ದಾರೆ.
ಹಾಸನ ನಗರದ ವಿದ್ಯಾನಗರದಲ್ಲಿರುವ ಪುಷ್ಪ ಅವರ ಮನೆಯ ಕೌಂಪೌಂಡ್ ಅನ್ನು ವ್ಯಕ್ತಿಯೊಬ್ಬರು ವಾರದ ಹಿಂದೆ ಜೆಸಿಬಿ ಬಳಸಿ ನೆಲಸಮಗೊಳಿಸಿದ್ದರು. ಕೋರ್ಟ್ ಅನುಮತಿಯ ಮೇರೆಗೆ ತಾವು ಕಾಂಪೌಂಡ್ ಅನ್ನು ತೆರವುಗೊಳಿಸಿರುವುದಾಗಿ ಅವರು ಹೇಳಿದ್ದರು. ಆದರೆ ಪುಷ್ಪ ಅವರ ಪರ ವಕೀಲರು, ವಿವಾದಿತ ಸ್ಥಳ ಪುಷ್ಪ ಅವರಿಗೇ ಸೇರಿದ್ದು, ಯಾವುದೇ ಕೋರ್ಟ್ ಅನುಮತಿ ಇಲ್ಲದೆ ಕಾಂಪೌಂಡ್ ಅನ್ನು ನೆಲಸಮ ಮಾಡಿದ್ದಾರೆ. ಇದರ ವಿರುದ್ಧ ದಾವೆ ಹೂಡಲಿದ್ದೇವೆ ಎಂದಿದ್ದರು.
ಇದೀಗ ಪೊಲೀಸ್ ಠಾಣೆಗೆ ಭೇಟಿ ನೀಡಿರುವ ಪುಷ್ಪ, ಅವರು ತಮ್ಮ ಸಂಬಂಧಿ ತಮ್ಮ ಪರವಾಗಿ ನೀಡಿದ್ದ ದೂರಿನ ಕುರಿತಾಗಿ ಪೊಲೀಸರ ಬಳಿ ಪ್ರಶ್ನೆ ಮಾಡಿದ್ದಾರೆ. ತಾವು ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಅಕ್ರಮವಾಗಿ ನಮ್ಮ ಸ್ಥಳದಲ್ಲಿ ಜೆಸಿಬಿ ನುಗ್ಗಿಸಿ ನಮ್ಮ ಕಾಂಪೌಂಡ್ ಅನ್ನು ನೆಲಸಮಗೊಳಿಸಿದ್ದಾರೆ. ಈ ಬಗ್ಗೆ ದೂರು ಸಹ ನೀಡಲಾಗಿದ್ದು, ದೂರಿಗೆ ತೆಗೆದುಕೊಂಡಿರುವ ಪ್ರಕ್ರಿಯೆ ಏನು ಎಂದು ಪುಷ್ಪ ಅವರು ಪೊಲೀಸರ ಬಳಿ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.
1500 ಅಡಿಗಳ ಜಾಗಕ್ಕೆ ಪುಷ್ಪ ಅವರು ಕಾಂಪೌಂಡ್ ಹಾಕಿದ್ದರು. ಕಾಂಪೌಂಡ್ ಅನ್ನು ದೇವರಾಜ್ ಹೆಸರಿನ ವ್ಯಕ್ತಿ ಕೆಡವಿದ್ದಾರೆ. ದೇವರಾಜ್ ಹೇಳಿರುವಂತೆ ಸದರಿ ಸ್ಥಳ ಲಕ್ಷ್ಮಮ್ಮ ಎಂಬುವರಿಗೆ ಸೇರಿದ್ದಾಗಿದ್ದು, ಪ್ರಸ್ತುತ ಅವರು (ದೇವರಾಜ್) ಆ ಸ್ಥಳದ ಜಿಪಿಎ ಮಾಲೀಕರು ಎಂದು ಹೇಳಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ತಾವು ಕಾಂಪೌಂಡ್ ಕೆಡವಿದ್ದಾಗಿ ಹೇಳಿಕೊಂಡಿದ್ದಾರೆ.
For More Updates Join our WhatsApp Group :



