ಪವಿತ್ರಾಗೆ ಶಾಕ್; ವಾರಕ್ಕೆ ಒಮ್ಮೆ ಮಾತ್ರ ಅವಕಾಶ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿರೋ ಪವಿತ್ರಾ ಗೌಡಗೆ ಮನೆ ಊಟ ನೀಡುವಂತೆ ಬೆಂಗಳೂರಿನ 57 ನೇ ಸಿಸಿಹೆಚ್ ಕೋರ್ಟ್ ಈ ಮೊದಲು ಆದೇಶ ನೀಡಿತ್ತು. ಈ ಆದೇಶವನ್ನು ಜೈಲಧಿಕಾರಿಗಳು ಪ್ರಶ್ನೆ ಮಾಡಿದ್ದರು. ಈ ವಿಷಯದಲ್ಲಿ ಕೋರ್ಟ್ ತನ್ನದೇ ತೀರ್ಪನ್ನು ಮಾರ್ಪಾಡು ಮಾಡಿದೆ. ವಾರದಲ್ಲಿ ಒಮ್ಮೆ ಮಾತ್ರ ಊಟ ನೀಡಲು ಅವಕಾಶ ನೀಡಿದೆ. ಇದರಿಂದ ಪವಿತ್ರಾಗೆ ಹಿನ್ನಡೆ ಆಗಿದೆ.
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಪವಿತ್ರಾ ಗೌಡ, ಜೈಲೂಟದಿಂದ ಸಮಸ್ಯೆ ಆಗುತ್ತಿದೆ ಎಂಬುದನ್ನು ಹೈಲೈಟ್ ಮಾಡಿದ್ದರು. ಜೈಲೂಟದಿಂದ ಚರ್ಮರೋಗ ಉಂಟಾಗಿದೆ, ಮೈಮೇಲೆ ಗುಳ್ಳೆಗಳು ಆಗುತ್ತಿವೆ ಎಂದು ವಾದ ಮಂಡಿಸಿದ್ದರು. ಜೈಲೂಟದಿಂದ ಫುಡ್‌ಪಾಯಿಸನ್ ಕೂಡ ಆಗುತ್ತಿದೆ ಎಂದು ಕೋರ್ಟ್ ಎದುರು ಹೇಳಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ್ದ ಕೋರ್ಟ್ ಮನೆ ಊಟಕ್ಕೆ ಅವಕಾಶ ನೀಡಿತ್ತು.
ಆದರೆ, ಇದನ್ನು ಜೈಲಾಧಿಕಾರಿಗಳು ವಿರೋಧಿಸಿದ್ದರು. ಜೈಲಿನ ಊಟ ಉತ್ತಮವಾಗಿದೆ, ಶುಚಿಯಾಗಿದೆ ಎಂದು ವಾದಿಸಿದ್ದರು. ‘ಈ ವರೆಗೆ ಜೈಲಿನಲ್ಲಿ ಊಟ ತಿಂದು ಪವಿತ್ರಾ ಸೇರಿದಂತೆ ಇನ್ಯಾರೂ ಸಹ ಅಸ್ವಸ್ತಗೊಂಡಿಲ್ಲ. ಹೀಗಿರುವಾಗ ಪ್ರತ್ಯೇಕವಾಗಿ ಮನೆ ಊಟದ ಅವಶ್ಯಕತೆ ಇಲ್ಲ’ ಎಂಬುದು ಪೊಲೀಸರ ವಾದ ಆಗಿತ್ತು.
ಜೈಲಧಿಕಾರಿಗಳ ವಾದವು ನ್ಯಾಯಾಲಯಕ್ಕೆ ಸರಿ ಎನಿಸಿದೆ. ಹೀಗಾಗಿ, 57 ನೇ ಸಿಸಿಹೆಚ್ ಕೋರ್ಟ್ ಆದೇಶವನ್ನು ಮಾರ್ಪಾಡು ಮಾಡಿದೆ. ವಾರಕ್ಕೆ ಒಮ್ಮೆ ಮಾತ್ರ ಊಟ ನೀಡಲು ಆದೇಶ ಕೊಟ್ಟಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪವಿತ್ರಾ ಗೌಡ ಎ1 ಆರೋಪಿ ಆಗಿದ್ದಾರೆ. ದರ್ಶನ್ ಅವರು ಎ2 ಆರೋಪಿ ಆಗಿದ್ದಾರೆ. ಈ ಪ್ರಕರಣದಲ್ಲಿ ಒಟ್ಟೂ 17 ಆರೋಪಿಗಳು ಇದ್ದಾರೆ. ಸದ್ಯ ಕೆಳ ಹಂತದ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.
For More Updates Join our WhatsApp Group :




