ತುಮಕೂರಿನಲ್ಲಿ ಗಾಂಧಿ ಸ್ಟೇಡಿಯಂ ಹೆಸರಿನ ವಿವಾದ.

ತುಮಕೂರಿನಲ್ಲಿ ಗಾಂಧಿ ಸ್ಟೇಡಿಯಂ ಹೆಸರಿನ ವಿವಾದ.

ಮಹಾತ್ಮ ಗಾಂಧೀಜಿ ಇಂಡೋರ್ ಸ್ಟೇಡಿಯಂಗೆ ಡಾ. ಜಿ. ಪರಮೇಶ್ವರ ಹೆಸರು: ಬಿಜೆಪಿ ಪ್ರತಿಭಟನೆ.

ತುಮಕೂರು: ತುಮಕೂರಿನ ಜಿಲ್ಲಾಮಟ್ಟದ ಏಕೈಕ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ. ಜಿ ಪರಮೇಶ್ವರ ಹೆಸರು ಇಟ್ಟಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಅವರ ಹೆಸರು ಇಟ್ಟಿದ್ದಷ್ಟೇ ಆದರೆ ವಿವಾದವಾಗುತ್ತಿರಲಿಲ್ಲವೇನೋ. ಮಹಾತ್ಮಾ ಗಾಂಧೀಜಿ ಹೆಸರಿನ ಬದಲಿಗೆ ಪರಮೇಶ್ವರ್ ಹೆಸರು ಇಟ್ಟಿರುವುದು ಪ್ರತಿಪಕ್ಷ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನು ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ 60 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಹೊರಾಂಗಣ ಕ್ರೀಡಾಂಗಣದ ಮುಂಬಾಗದಲ್ಲೇ ಒಳಾಂಗಣ ಸ್ಟೇಡಿಯಂ ಇದೆ. ಇದಕ್ಕೆ ಪ್ರತ್ಯೇಕ ನಾಮಫಲಕ ಇಲ್ಲದ್ದಿದ್ರೂ ಮಹಾತ್ಮಾ ಗಾಂಧಿ ಇಂಡೋರ್ ಸ್ಟೇಡಿಯಂ ಅಂತಲೇ ಕರೆಯಲಾಗುತ್ತಿತ್ತು. ಆದರೆ, 3 ದಿನದ ಹಿಂದೆ ದಿಢೀರ್ ಆಗಿ ಗೃಹಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಹೆಸರನ್ನು ನಾಮಕರಣ ಮಾಡಲಾಗಿದೆ. ಡಾ. ಜಿ. ಪರಮೇಶ್ವರ್ ಒಳಾಂಗಣ ಕ್ರೀಡಾ ಸಂಕೀರ್ಣ ಎಂಬ ನಾಮಫಲಕವನ್ನು ಅಳವಡಿಸಿದೆ. ಇದು ಬಿಜೆಪಿಗರ ಆಕ್ರೋಶ ಭುಗಿಲೇಳುವಂತೆ ಮಾಡಿದೆ.

ಇದರ ವಿರುದ್ಧ ಸೋಮವಾರ ಸಂಜೆ ಬಿಜೆಪಿಯ ನೂರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮೂಲಕ ಕ್ರೀಡಾಂಗಣ ಬಳಿ ಲಗ್ಗೆ ಹಾಕಿದರು. ದ್ವಾರದ ಬಳಿಯೇ ಕುಳಿತು ಪ್ರತಿಭಟನೆ ನಡೆಸಿದರು. ಇನ್ನು ಪರಮೇಶ್ವರ್ ಹೆಸರಿನ ನಾಮಫಲಕ ತೆರವಿಗೆ ಮುಂದಾಗುತ್ತಿದ್ದಂತೆಯೇ ಜಟಾಪಟಿಯೇ ನಡೆಯಿತು. ಪೊಲೀಸರ ಬ್ಯಾರಿಕೇಡ್‌ ತಳ್ಳಿ ಒಳನುಗ್ಗಲು ಯತ್ನಿಸಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಪೊಲೀಸರು ಅಂತಿಮವಾಗಿ ಬಿಜೆಪಿ ಮುಖಂಡರು ಸೇರಿ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಬಿಜೆಪಿ ಶಾಸಕ ಸುರೇಶ್‌ಗೌಡ ಮಾತನಾಡಿ, ಇದು ಪರಮೇಶ್ವರ್ ಅವರ ಹಿಂಬಾಲಕರು ಮೆಚ್ಚಿಸಲೆಂದು ಮಾಡಿರುವುದು. ಪರಮೇಶ್ವರ್ ಅವರೇ ಈ ತಪ್ಪು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಸ್ಥಳೀಯ ಸಂಸ್ಥೆ ಅಥವಾ ಸಂಬಂಧ ಪಟ್ಟ ಇಲಾಖೆಯಿಂದ ಠರಾವು ಪಡೆಯದೇ ಈ ರೀತಿ ಹೆಸರುಬದಲಿಸಿದ್ದು ಸರಿಯಲ್ಲ ಎಂದಿದ್ದಾರೆ.

ಇದೇ ತಿಂಗಳ 16 ರಿಂದ ಇದೇ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಒಲಂಪಿಕ್ ಕ್ರೀಡಾಕೂಟ ನಡೆಯುತ್ತಿದೆ. ಇದೇ ಸಂದರ್ಭ ಸರ್ಕಾರದ ಆದೇಶ ಇಲ್ಲದ್ದಿದ್ದರೂ ಅಧಿಕಾರಿಗಳು ತರಾತುರಿಯಲ್ಲಿ ಮಹಾತ್ಮಾ ಗಾಂಧೀಜಿ ಹೆಸರು ಬದಲಿಸಿ ಡಾ.ಜಿ.ಪರಮೇಶ್ವರ್ ಹೆಸರಿನ ನಾಮಫಲಕ ಹಾಕಿ ವಿವಾದ ಸೃಷ್ಟಿಸಿದ್ದಾರೆ. ಪರಮೇಶ್ವರ್ ಅವರೇ ಮಧ್ಯಪ್ರವೇಶಿಸಿ ಈ ವಿವಾದಕ್ಕೆ ತೆರೆ ಎಳೆಯಬೇಕಿದೆ.

ಪರಮೇಶ್ವರ್ ಹೇಳಿದ್ದೇನು?

ತುಮಕೂರಿನಲ್ಲಿ ಗಾಂಧೀಜಿ ಮೈದಾನ ಹೆಸರು ಬದಲಾವಣೆ ಆರೋಪ ಸಂಬಂಧ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಗಾಂಧಿ ಹೆಸರು ಬದಲಾವಣೆ ಮಾಡಲು ಆಗುತ್ತಾ? ಮಹಾತ್ಮ ಗಾಂಧೀಜಿ ಸ್ಟೇಡಿಯಂಗೆ ಇರುವ ಹೆಸರು ತೆಗೆಯುತ್ತಾರೆ ಎಂದರೆ ಅದು ಹುಚ್ಚರು ಹೇಳುವ ಮಾತು ಎಂದಿದ್ದಾರೆ. ಅಲ್ಲಿ ಶೆಡ್ ಇದೆ, ಅದನ್ನು ಒಳಾಂಗಣ ಕ್ರೀಡಾಂಗಣ ಮಾಡಿದ್ದಾರೆ. ಅದಕ್ಕೆ ಡಾ.ಪರಮೇಶ್ವರ್​​ ಹೆಸರು ಇಡುವಂತೆ ಪತ್ರ ಬರೆದಿದ್ದರು. ಆ ವಿಚಾರಕ್ಕೆ ಅವರು ರಾಜಕೀಯ ಮಾಡೋಕೆ ಹೊರಟರೆ ಹೇಗೆ? ಕ್ರೀಡಾಂಗಣಕ್ಕೆ ಮಹಾತ್ಮ ಗಾಂಧೀಜಿ ಹೆಸರು ತೆಗೆಯಲು ಆಗುತ್ತಾ ಎಂದು ಪರಮೇಶ್ವರ್ ಪ್ರಶ್ನಿಸಿದ್​ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *