ಅಭಿಮಾನಿ ಘಟನೆಯಿಂದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ.
ಬೆಂಗಳೂರು : ಅಭಿಮಾನಿಯೊಬ್ಬರು ಕೊಟ್ಟ ರಾಘವೇಂದ್ರ ಸ್ವಾಮಿಗಳ ಫೋಟೊ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದು, ವಾಪಸ್ ನೀಡಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ ಬೆಂಗಳೂರಿನಲ್ಲಿ ಸಿಎಂ ಕಾರಿನಲ್ಲಿ ಬರುತ್ತಿದ್ದಂತೆಯೇ ಕೆಲವು ಮಂದಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಅವರಿಗೆ ಮನವಿ ಪತ್ರ ಕೊಡಲು ಮುಂದಾಗಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಫೋಟೋ ಸಿಎಂಗೆ ಕೊಟ್ಟಿದ್ದಾರೆ. ತಕ್ಷಣವೇ ಅದನ್ನು ಆತನಿಗೆ ವಾಪಸ್ ಕೊಟ್ಟ ಸಿಎಂ ಆತನನ್ನು ದುರುಗುಟ್ಟಿ ನೋಡಿದ್ದಾರೆ. ಇದೇ ವೇಳೆ, ಚಾಣಕ್ಯನ ಕುರಿತಾದ ಪುಸ್ತಕವನ್ನು ಅಭಿಮಾನಿಯೊಬ್ಬ ಕೊಟ್ಟಿದ್ದು, ಅದನ್ನು ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಈ ಹಿಂದೆ ಕುಂಕುಮ, ಪೇಟ ತಿರಸ್ಕರಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಅದೇ ರೀತಿ ಇದೀಗ ರಾಯರ ಫೋಟೊ ತಿರಸ್ಕರಿಸಿದ್ದೂ ಚರ್ಚೆಗೆ ಗ್ರಾಸವಾಗಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯಗೆ ಹಿಂದೂ ದೇವರನ್ನು ಕಂಡರೆ ಆಗಿ ಬರಲ್ಲ. ತಿಲಕ, ನಾಮ ಹಾಗೂ ಕೃಷ್ಣನನ್ನು ಕಂಡರೇ ಆಗಿ ಬರುವುದಿಲ್ಲ. ಅವರಿಗೆ ಟೋಪಿ ಕಂಡರೆ ಮಾತ್ರ ಖುಷಿಯಾಗುತ್ತದೆ. ಟಿಪ್ಪು ಜಯಂತಿ ಮಾಡಿದರು, ಆಗ ಕೋಮು ಗಲಭೆಗಳು ಆದವು. ಕೋಗಿಲು ಲೇಔಟ್ನ ಮುಸ್ಲಿಮರಿಗೆ ಮನೆಗಳು ಕೊಡುವುದು ಇತ್ಯಾದಿ ಅದು ಅವರ ನಿರಂತರ ಪ್ರಕ್ರಿಯೆ ಎಂದು ಕಿಡಿಕಾರಿದರು.
ಹಿಂದೂಗಳು ಕೂಡ ಎಚ್ಚರಿಕೆಯಿಂದ ಇರಬೇಕು. ಬಹುಸಂಖ್ಯಾತ ಹಿಂದೂಗಳು ಸಿದ್ದರಾಮಯ್ಯಗೆ ಪಾಠ ಕಲಿಸಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ ತಮ್ಮ ಚಾಳಿಯನ್ನು ಮುಂದುವರಿಸುತ್ತಾರೆ ಎಂದು ಅಶೋಕ್ ಎಚ್ಚರಿಕೆ ನೀಡಿದರು.
For More Updates Join our WhatsApp Group :




