ಬೆಂಗಳೂರು–ಬಳ್ಳಾರಿಯಲ್ಲಿ ಇಡಿ ಏಕಕಾಲದ ದಾಳಿ.
ಬೆಂಗಳೂರು: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದದ 4.5 ಕೆಜಿ ಚಿನ್ನದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಅಯ್ಯಪ್ಪ ದೇವಸ್ಥಾನ ಮತ್ತು ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಉನ್ನಿಕೃಷ್ಣನ್ ಪೊಟ್ಟಿಗೆ ಸೇರಿದ ಮನೆ ಹಾಗೂ ಟ್ರಸ್ಟಿಗಳ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಳ್ಳಾರಿಯ ಪ್ರತಿಷ್ಠಿತ ರೊದ್ದಂ ಜ್ಯುವೆಲ್ಲರಿ ಅಂಗಡಿ ಮತ್ತು ಅದರ ಮಾಲೀಕ ಗೋವರ್ಧನ್ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು 9 ಮಂದಿ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ.
ಚಿನ್ನ ಕಳವು ಪ್ರಕರಣದಲ್ಲಿ ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ ಪಾತ್ರ ಪ್ರಮುಖವಾಗಿದೆ ಎನ್ನಲಾಗಿದೆ. ಮುಖ್ಯ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ದೇವಸ್ಥಾನದಿಂದ ಕಳವು ಮಾಡಿದ್ದ ಚಿನ್ನವನ್ನು ಗೋವರ್ಧನ್‌ಗೆ ಮಾರಾಟ ಮಾಡಿದ್ದ ಎಂಬ ಆರೋಪವಿದೆ. ಅಕ್ರಮವಾಗಿ 470 ಗ್ರಾಂ ಚಿನ್ನವನ್ನು ಖರೀದಿಸಿದ ಆರೋಪದ ಮೇಲೆ ಕೇರಳ ಎಸ್‌ಐಟಿ (SIT) ಅಧಿಕಾರಿಗಳು ಗೋವರ್ಧನ್‌ನನ್ನು ಈಗಾಗಲೇ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಈ ಪ್ರಕರಣದಲ್ಲಿ ದೊಡ್ಡ ಮಟ್ಟದ ಹಣ ಅಕ್ರಮ ವರ್ಗಾವಣೆ ನಡೆದಿರುವ ಶಂಕೆ ವ್ಯಕ್ತವಾಗಿದರಿಂದ ಇಡಿ ಈಗ ಮನಿ ಲಾಂಡರಿಂಗ್ ಕಾಯ್ದೆಯಡಿ (PMLA) ತನಿಖೆ ಆರಂಭಿಸಿದೆ. ಅಲ್ಲದೆ, ಶಬರಿಮಲೆ ಚಿನ್ನ ಕಳವು ಪ್ರಕರಣ ಕಳ್ಳತನಕ್ಕಷ್ಟೇ ಸೀಮಿತವಾಗಿಲ್ಲ, ಇದರಲ್ಲಿ ಪ್ರಭಾವಿಗಳ ಕೈವಾಡವಿದೆ ಎಂಬ ಆರೋಪವೂ ಕೇಳಿಬಂದಿತ್ತು.
ಶಬರಿಮಲೆ ಚಿನ್ನ ಕಳವು ಪ್ರಕರಣ ಹಾಗೂ ಕರ್ನಾಟಕ ಲಿಂಕ್ ಹಿನ್ನೆಲೆ
2019ರಲ್ಲಿ ಶಬರಿಮಲೆಯ ದ್ವಾರಪಾಲಕ ವಿಗ್ರಹಗಳಿಗೆ ಚಿನ್ನದ ಲೇಪನ ಮಾಡುವ ಸಂದರ್ಭದಲ್ಲಿ ಸುಮಾರು 4.5 ಕೆಜಿ ಚಿನ್ನ ನಾಪತ್ತೆಯಾಗಿತ್ತು. ಈ ಬಗ್ಗೆ ಕೇರಳ ಹೈಕೋರ್ಟ್ ತನಿಖೆಗೆ ಆದೇಶಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಬರಿಮಲೆಯ ಮಾಜಿ ಮುಖ್ಯ ಅರ್ಚಕ (ತಂತ್ರಿ) ಕಂದರಾರು ರಾಜೀವ್, ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷರು ಸೇರಿದಂತೆ ಈಗಾಗಲೇ 12ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
For More Updates Join our WhatsApp Group :




