ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಹೈಕೋರ್ಟ್ ಸ್ಪಷ್ಟ ಸಂದೇಶ
ರೇಣುಕಾ ಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್ ಅವರುಗಳು ನ್ಯಾಯಾಂಗ ಬಂಧನದಲ್ಲಿದ್ದು ಅವರಿಗೆ ವಾರಕ್ಕೊಮ್ಮೆ ಮನೆ ಊಟ ಲಭಿಸುತ್ತಿತ್ತು. ಟ್ರಯಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿ ಈ ಮೂವರು ಜೈಲಿನಲ್ಲೇ ಮನೆ ಊಟ ಸಿಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದರು. ಪೊಲೀಸರ ಮೇಲ್ಮನವಿಯ ಬಳಿಕ ಪ್ರತಿದಿನ ಅಲ್ಲ ಬದಲಿಗೆ ವಾರಕ್ಕೆ ಒಮ್ಮೆ ಮನೆ ಊಟ ಕೊಡಬಹುದು, ವೈದ್ಯರು ಸಲಹೆ ಕೊಟ್ಟರೆ ದರ್ಶನ್ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳಿಗೂ ಮನೆ ಊಟ ಕೊಡಬಹುದು ಎಂದಿದ್ದರು. ಆದರೆ ಇದೀಗ ಈ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಪವಿತ್ರಾ ಗೌಡ ಮತ್ತು ಇತರೆ ಇಬ್ಬರು ಆರೋಪಿಗಳಿಗೆ ಮನೆ ಊಟ ಕೊಡುವಂತೆ 57ನೇ ಸಿಸಿಎಚ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಜೈಲಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಇದೇ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜೈಲಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು, ಯಾವುದೇ ಆರೋಪಿಗೆ ವಿಶೇಷ ಸವಲತ್ತು ನೀಡಬಾರದು ಎಂದು ಸೂಚಿಸಿದೆ, ವಿಶೇಷ ಸವಲತ್ತು ನೀಡಿದಲ್ಲಿ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ. ಅಲ್ಲದೆ, ಪವಿತ್ರಾ ಗೌಡ ಮತ್ತು ಇರೆ ಇಬಬರು ಆರೋಪಿಗಳಿಗೆ ಮನೆ ಊಟಕ್ಕೆ ಅವಕಾಶ ನೀಡಿದರೆ ಜೈಲಿನ ಇತರೆ ಕೈದಿಗಳೂ ಸಹ ಮನೆ ಊಟಕ್ಕೆ ಬೇಡಿಕೆ ಇಡುತ್ತಾರೆ, ಜೈಲಿನ ಶಿಸ್ತು ಸಡಿಲವಾಗುತ್ತದೆ ಎಂದು ಸರ್ಕಾರಿ ವಕೀಲರು ವಾದಿಸಿದ್ದರು.
ಅಲ್ಲದೆ, ಜೈಲಿನಲ್ಲಿ ಈಗಾಗಲೇ ಎಫ್ಎಸ್ಎಸ್ಎಐ ಸೂಚನೆಯಂತೆ ಫೋರ್ ಸ್ಟಾರ್ ಆಹಾರವನ್ನೇ ಎಲ್ಲ ಕೈದಿಗಳಿಗೂ ನೀಡಲಾಗುತ್ತಿದೆ. ಜೈಲಿನ ಆಹಾರ ಶುಚಿಯಾಗಿಯೂ, ರುಚಿಯಾಗಿಯೂ, ಆರೋಗ್ಯಕರವಾಗಿಯೂ ಇದೆ ಹೀಗಿರುವಾಗ ಮನೆಯಿಂದ ಊಟ ನೀಡುವ ಔಚಿತ್ಯ ಏನಿದೆ? ಎಂದು ಸರ್ಕಾರಿ ವಕೀಲರು ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದರು.
ವಾದ ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು, 57ನೇ ಸಿಸಿಎಚ್ ನ್ಯಾಯಾಲಯ ನಿಡಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಕಾನೂನಿಗೆ ಎಲ್ಲರೂ ಒಂದೇ ಎಂದಿರುವ ನ್ಯಾಯಾಲಯವು, ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿರುವಂತೆ ಯಾರಿಗೂ ಸಹ ವಿಶೇಷ ಸವಲತ್ತು ನೀಡುವಂತಿಲ್ಲ ಎಂದಿದೆ. ಅಲ್ಲದೆ, ಜೈಲು ಕೈಪಿಡಿಯಲ್ಲಿ ಮನೆ ಊಟವನ್ನು ಕೇವಲ ಬಹಳ ವಿಶೇಷ ಸಂದರ್ಭದಲ್ಲಿ ಐಜಿಪಿ ಅವರ ಒಪ್ಪಿಗೆ ಮೇರೆಗೆ ಮಾತ್ರವೇ ನೀಡಬೇಕು, ಅದೂ ಆ ಕಾರಣ ವೈದ್ಯಕೀಯ ಕಾರಣ ಆಗಿರಬೇಕು ಎಂಬುದನ್ನು ಸಹ ಹೈಕೋರ್ಟ್ ಉಲ್ಲೇಖಿಸಿದೆ.
ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್ ಅವರುಗಳು ಜೈಲಿನಲ್ಲಿ ಇದ್ದಾಗಿಯೂ ವಾರಕ್ಕೊಮ್ಮೆ ಮನೆ ಊಟ ಸವಿಯುತ್ತ ವಿಶೇಷ ಸವಲತ್ತನ್ನು ಅನುಭವಿಸುತ್ತಿದ್ದರು ಆದರೆ ನ್ಯಾಯಾಲಯದ ಆದೇಶದಿಂದ ವಿಶೇಷ ಸವಲತ್ತಿಗೆ ಕತ್ತರಿ ಬಿದ್ದಿದ್ದು, ಸಂಪೂರ್ಣವಾಗಿ ಜೈಲೂಟವೇ ಗತಿ ಆಗಿದೆ.
For More Updates Join our WhatsApp Group :




