ಮಲೆಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿ.

ಮಲೆಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿ.

ಪಾದಯಾತ್ರಿಕ ಭಕ್ತ ಬಲಿ; 4 ದಿನ ಪಾದಯಾತ್ರೆಗೆ ನಿರ್ಬಂಧ.

ಚಾಮರಾಜನಗರ: ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತನೋರ್ವ ಚಿರತೆದಾಳಿಗೆ ಬಲಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ನಿವಾಸಿ ಪ್ರವೀಣ್​ ಮೃತ ದುರ್ದೈವಿಯಾಗಿದ್ದು, ತಡರಾತ್ರಿ ತಾಳ ಬೆಟ್ಟದ ಬಳಿ ಪೂಜೆ ಸಲ್ಲಿಸಿ ತೆರಳುವಾಗ ಚಿರತೆ ದಾಳಿ ನಡೆಸಿದೆ.  ಪಾದಯಾತ್ರೆ ಹೊರಟಿದ್ದ ಐವರು  ತೆರಳುವಾಗ ತಡೆಗೋಡೆ ಮೇಲೆ ಕುಳಿತಿದ್ದ ಚಿರತೆ ನೋಡಿ ಬೆಚ್ಚಿ ಬಿದ್ದಿದ್ದಿದ್ದಾರೆ. ಗಾಬರಿಯಿಂದ ಓಡಿ ಹೋಗುವಾಗ ಪ್ರವೀಣ್ ನಾಪತ್ತೆಯಾಗಿದ್ದ. ತಡೆಗೋಡೆಯಿಂದ ಕೆಳಗೆ ಬಿದ್ನಾ, ಇಲ್ಲ ಚಿರತೆ ದಾಳಿ ಮಾಡಿದೆಯಾ? ಎಂಬ ಅನುಮಾನ ಆರಂಭದಲ್ಲಿ ಮೂಡಿತ್ತು. ಆದರೆ ಅಂತಿಮವಾಗಿ ಚಿರತೆ ದಾಳಿಗೆ ಆತ ಬಲಿಯಾಗಿರೋದು ದೃಢಪಟ್ಟಿದೆ.

ಶವದ ಪಕ್ಕವೇ ಕುಳಿತಿದ್ದ ನರಭಕ್ಷಕ ಚಿರತೆ

ತಾಳಬೆಟ್ಟದ ಕಂದಕದಲ್ಲಿ ಪ್ರವೀಣ್ ಶವ ಪತ್ತೆಯಾಗಿದ್ದು, ಮಾದಪ್ಪನ ಭಕ್ತನ ಕೊಂದ ನರಭಕ್ಷಕ ಚಿರತೆ ಆತನ ರಕ್ತ ಹೀರಿದೆ. ಸುಮಾರು 1 ಕಿ.ಮೀ. ಕಾಡಿನೊಳಗೆ ಚಿರತೆ ಶವ ಎಳೆದುಕೊಂಡು ಹೋಗಿದ್ದು, ಶವ ಪತ್ತೆ ವೇಳೆಯೂ ಪ್ರವೀಣ್ ಮೃತದೇಹದ ಪಕ್ಕದಲ್ಲೇ ಕುಳಿತಿತ್ತು. ಹೀಗಾಗಿ ಶವ ಹೊರತೆಗೆಯಲು ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಅಂತಿಮವಾಗಿ ಪಟಾಕಿ ಸಿಡಿಸಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಓಡಿಸಿದ್ದು, ಸದ್ಯ ಮರಣೋತ್ತರ ಪರೀಕ್ಷೆಗಾಗಿ ಹನೂರು ಆಸ್ಪತ್ರೆಗೆ ಶವ ರವಾನೆ ಮಾಡಲಾಗಿದೆ. ಬೆಳಗಿನ ಜಾವ 5.30ಕ್ಕೆ ತೆರಳುವಂತೆ ನಮಗೆ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದರು. ನಾವು 6 ಗಂಟೆ ವೇಳೆಗೆ ಹೋಗುತ್ತಿದ್ದ ವೇಳೆ ಚಿರತೆ ಕಾಣಿಸಿದ್ದು, ಸ್ಥಳದಿಂದ ಓಡಲು ಆರಂಭಿಸಿದ್ದೆವು. ಚಿರತೆ ಚಿರತೆ ಎಂದು ಕಿರುಚಾಡಿದ್ದೆವು ಎಂದು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *