ವಾಚ್ ಆರ್ಡರ್ ಮಾಡಿದವರಿಗೆ ಕೈಗೆ ಬಂದಿದ್ದು ಆಲೂಗಡ್ಡೆ.
ರಾಯಚೂರು : ಸಾಮಾಜಿಕ ಜಾಲತಾಣಗಳಲ್ಲಿ ಶಾಪಿಂಗ್ ಮಾಡುವವರಿಗಿದು ಎಚ್ಚರಿಕೆಯ ಗಂಟೆ. ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡ ಭರ್ಜರಿ ಆಫರ್ ನಂಬಿ ವಾಚ್ ಆರ್ಡರ್ ಮಾಡಿದ ವ್ಯಕ್ತಿಗೆ ಕೈಗೆ ಬಂದಿದ್ದು ಆಲೂಗಡ್ಡೆ ಪಾರ್ಸಲ್! ಈ ಅಚ್ಚರಿಯ ಘಟನೆ ರಾಯಚೂರು ಜಿಲ್ಲೆಯ ಯರಮರಸ್ ಬಳಿ ನಡೆದಿದೆ. ಆಂಧ್ರಪ್ರದೇಶ ಮೂಲದ ದಗ್ಗುಬಾಟಿ ಬಾಬು ಎಂಬವರು ಕೆಲಸಕ್ಕಾಗಿ ರಾಯಚೂರಿಗೆ ಬಂದಿದ್ದು, ಯರಮರಸ್ ಸಮೀಪದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಜನವರಿ 13ರಂದು ಸಾಮಾಜಿಕ ಜಾಲತಾಣದಲ್ಲಿ 5 ಸಾವಿರ ರೂ. ಬೆಲೆ ಬಾಳುವ ವಾಚ್ ಕೇವಲ 1,200 ರೂ.ಗೆ ಸಿಗುತ್ತದೆ ಎಂಬ ಜಾಹೀರಾತು ನೋಡಿ ಅವರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಾರೆ.
ಕೆಲವು ದಿನಗಳ ಬಳಿಕ ಕೊರಿಯರ್ ಮೂಲಕ ಪಾರ್ಸಲ್ ಬಂದಿದ್ದು, ಕ್ಯಾಶ್ ಆನ್ ಡೆಲಿವರಿ ಮೂಲಕ ಹಣ ಪಾವತಿಸಿ ಬಾಬು ಪಾರ್ಸಲ್ ಪಡೆದಿದ್ದಾರೆ. ಬಾಕ್ಸ್ ಅನ್ನು ಅಲ್ಲಿಯೇ ತೆರೆದು ತೋರಿಸುವಂತೆ ಅವರು ಕೇಳಿಕೊಂಡಾಗ, ವಾಚ್ ಬದಲು ಹಳೆ ಬಟ್ಟೆಯಲ್ಲಿ ಸುತ್ತಿದ ಒಂದು ಆಲೂಗಡ್ಡೆ ಕಂಡು ಬೆಚ್ಚಿಬಿದ್ದಿದ್ದಾರೆ.
ಈ ಬಗ್ಗೆ ಖಾಸಗಿ ಕೊರಿಯರ್ ಕಂಪೆನಿಯೇ ವಂಚನೆ ಮಾಡಿದೆ ಎಂದು ಬಾಬು ಆರೋಪಿಸಿದರೂ, ಕೊರಿಯರ್ ಸಿಬ್ಬಂದಿ ಅದನ್ನು ನಿರಾಕರಿಸಿ ಪಾರ್ಸಲ್ ಬರುವ ಮೊದಲೇ ವಂಚನೆ ನಡೆದಿರಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ. ಇದೀಗ ಈ ಕುರಿತು ಗ್ರಾಹಕ ನ್ಯಾಯಾಲಯ ಹಾಗೂ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಾಬು ಮುಂದಾಗಿದ್ದಾರೆ.
For More Updates Join our WhatsApp Group :




