ಪುರುಷರಲ್ಲಿನ ಹೋರ್ಮೋನು, ಪೋಷಕಾಂಶ ಮತ್ತು ಕೂದಲಿನ ಆರೋಗ್ಯದ ಮೇಲೆ ಪರಿಣಾಮ.
ಇತ್ತೀಚಿನ ದಿನಗಳಲ್ಲಿ, ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲಿಯೂ ಪುರುಷರಲ್ಲಿ ಈ ಸಮಸ್ಯೆ ಹೆಚ್ಚು. ಇದಕ್ಕೆ ಕಾರಣಗಳು ಹಲವಾರಿರಬಹುದು. ಜೀವನಶೈಲಿಯಲ್ಲಿ ಮಾಡಿಕೊಂಡ ಬದಲಾವಣೆ, ಆಹಾರ ಪದ್ಧತಿ ಮತ್ತು ದೈನಂದಿನ ಆಹಾರ ಆಯ್ಕೆಗಳು ಪ್ರಮುಖವಾಗುತ್ತದೆ. ಅದರಲ್ಲಿಯೂ ಸಿಹಿಯಾಗಿರುವ ಪಾನೀಯಗಳ ಸೇವನೆ ಮಾಡುವ ಅಭ್ಯಾಸ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ತಂಪು ಪಾನೀಯ, ಪ್ಯಾಕ್ ಮಾಡಿಟ್ಟ ಹಣ್ಣಿನ ರಸ ಅಥವಾ ಜ್ಯೂಸ್, ಶಕ್ತಿ ಹೆಚ್ಚಿಸುವ ಪಾನೀಯಗಳು ಮತ್ತು ಸುವಾಸನೆ ಭರಿತ ಶೇಕ್‌ಗಳು ದೈನಂದಿನ ಜೀವನದ ಭಾಗವಾಗಿವೆ. ಈ ಪಾನೀಯಗಳು ಸೇವನೆ ಮಾಡುವುದಕ್ಕೆ ರುಚಿಕರವಾಗಿರುತ್ತದೆ, ಆದರೆ ಇದರಿಂದ ಉಂಟಾಗುವ ಪರಿಣಾಮವನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ. ಕೂದಲು ಉದುರುವುದು ವಯಸ್ಸಿಗೆ ಸಂಬಂಧಿಸಿದೆ ಎಂದು ಅನೇಕರು ನಂಬುತ್ತಾರೆ, ಆದರೆ ಆಹಾರಕ್ರಮವೂ ಪ್ರಮುಖ ಅಂಶ ಎಂಬುದನ್ನು ಮರೆಯಬಾರದು. ಹಾಗಾಗಿ ಪ್ರತಿದಿನ ಸೇವಿಸುವ ಸಿಹಿ ಪದಾರ್ಥಗಳು ಕೂದಲಿನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಸಿಹಿಯಾಗಿರುವ ಪಾನೀಯಗಳು ಪುರುಷರಲ್ಲಿ ಕೂದಲು ಉದುರುವಿಕೆಯ ಅಪಾಯವನ್ನು ಯಾವ ರೀತಿ ಹೆಚ್ಚಿಸುತ್ತವೆ ಎಂಬುದನ್ನು ತಿಳಿದುಕೊಳ್ಳಿ.
ಸಿಹಿ ಪಾನೀಯಗಳ ಸೇವನೆ ಪುರುಷರಲ್ಲಿ ಕೂದಲು ಉದುರುವಿಕೆಯನ್ನು ಹೇಗೆ ಹೆಚ್ಚಿಸುತ್ತವೆ?
ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಸಿಹಿಯಾದ ಪಾನೀಯಗಳಲ್ಲಿ ಬಹಳಷ್ಟು ಪ್ರಮಾಣದ ಸಕ್ಕರೆ ಅಂಶವಿರುತ್ತದೆ, ಇದು ದೇಹದಲ್ಲಿ ವಿವಿಧ ಬದಲಾವಣೆಗಳಿಗೆ ಕಾರಣವಾಗುತ್ತದೆ. ಸಕ್ಕರೆ ಸೇವನೆಯು ಅಗತ್ಯಕ್ಕಿಂತ ಹೆಚ್ಚಾದಾಗ, ದೇಹದ ಸಮತೋಲನಕ್ಕೆ ತೊಂದರೆಯಾಗುತ್ತದೆ. ಇದು ಹಾರ್ಮೋನುಗಳ ವ್ಯವಸ್ಥೆ, ನೆತ್ತಿಯ ಆರೋಗ್ಯ ಮತ್ತು ಕೂದಲಿನ ಬೇರುಗಳ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಹೆಚ್ಚು ಸಕ್ಕರೆಯ ಸೇವನೆ ಪೋಷಕಾಂಶಗಳ ಸರಿಯಾದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ, ಅಂದರೆ ಕೂದಲು ಅಗತ್ಯ ಪೋಷಣೆಯನ್ನು ಪಡೆದುಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಸಿಹಿ ಪಾನೀಯಗಳು ಹಸಿವಿನ ಮೇಲೆ ಪರಿಣಾಮ ಬೀರುತ್ತವೆ.
ಕಾಲಾನಂತರದಲ್ಲಿ, ಇದು ಕೂದಲನ್ನು ದುರ್ಬಲಗೊಳಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ. ಅಷ್ಟೇಅಲ್ಲ, ತಲೆಹೊಟ್ಟು ಮತ್ತು ಕೂದಲು ತೆಳುವಾಗುವಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ರೀತಿಯಾಗಿ, ಸಿಹಿ ಪಾನೀಯಗಳು ಕೂದಲಿನ ಮೇಲೆ ನೇರವಾಗಿ ಪರಿಣಾಮ ಬೀರುವುದಿಲ್ಲ ಆದರೆ ಕೂದಲಿನ ಆರೋಗ್ಯದ ಮೇಲೆ ಹಲವಾರು ರೀತಿಯಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಕೂದಲು ಉದುರುವುದನ್ನು ತಡೆಯಲು ಸಲಹೆಗಳು?
ಕೂದಲು ಉದುರುವಿಕೆಯಿಂದ ಬಳಲುತ್ತಿದ್ದರೆ, ಮೊದಲು ಸಿಹಿ ಪಾನೀಯಗಳ ಪ್ರಮಾಣವನ್ನು ಕಡಿಮೆ ಮಾಡಲು ಪ್ರಯತ್ನಿಸಿ. ನೀವು ಪ್ರತಿದಿನ ತಂಪು ಪಾನೀಯಗಳು ಅಥವಾ ಪ್ಯಾಕ್ ಮಾಡಿದ ಹಣ್ಣಿನ ಜ್ಯೂಸ್ ಗಳನ್ನು ಕುಡಿಯುವ ಅಭ್ಯಾಸವನ್ನು ಹೊಂದಿದ್ದರೆ, ಅವುಗಳನ್ನು ಕ್ರಮೇಣ ಕಡಿಮೆ ಮಾಡುವುದು ಅಥವಾ ಒಂದು ಹಂತದಲ್ಲಿ ನಿಲ್ಲಿಸುವುದು ಉತ್ತಮ. ಬದಲಾಗಿ, ನೀರು, ಎಳನೀರು ಅಥವಾ ಸಕ್ಕರೆ ರಹಿತ ಪಾನೀಯಗಳನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲದೆ ನೀವು ಸೇವನೆ ಮಾಡುವ ಆಹಾರದ ಬಗ್ಗೆ ಹೆಚ್ಚು ಗಮನ ಕೊಡಿ. ಪ್ರೋಟೀನ್, ಹಣ್ಣು, ತರಕಾರಿ ಮತ್ತು ಧಾನ್ಯಗಳು ನೀವು ಸೇವನೆ ಮಾಡುವ ಆಹಾರದಲ್ಲಿರಲಿ. ಇದೆಲ್ಲದರ ಜೊತೆಗೆ ಒತ್ತಡ ಕಡಿಮೆ ಮಾಡಲು ಪ್ರಯತ್ನಿಸಿ. ಜೊತೆಗೆ ಪ್ರತಿದಿನ ಸರಿಯಾಗಿ ನಿದ್ರೆ ಮಾಡಿ.
For More Updates Join our WhatsApp Group :




