ಮಿಲ್ಲೆಟ್ ಟು ಮೈಕ್ರೋಚಿಪ್: ಕರ್ನಾಟಕ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪೆರೇಡ್​​​.

ಮಿಲ್ಲೆಟ್ ಟು ಮೈಕ್ರೋಚಿಪ್: ಕರ್ನಾಟಕ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪೆರೇಡ್​​​.

ಕೃಷಿಯಿಂದ ತಂತ್ರಜ್ಞಾನವರೆಗೆ, ಕರ್ನಾಟಕದ ಪ್ರಗತಿ ಚಿತ್ರರೇಖೆ

ಬೆಂಗಳೂರು: ಜನವರಿ 26ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​​​ನಲ್ಲಿ ಕರ್ನಾಟಕದಿಂದ ಮಿಲ್ಲೆಟ್ ಟು ಮೈಕ್ರೋಚಿಪ್ ಪರಿಲ್ಪನೆಯ ಸ್ತಬ್ಧಚಿತ್ರ ಭಾಗವಹಿಸಲಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದ್ದು, ಈ ಪಯಣವನ್ನು ಸಂಕೇತಿಸುವಂತೆ ಟ್ಯಾಬ್ಲೋ ಇರಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನ ಮತ್ತು ಭಾರತ ಪರ್ವದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತನ್ನ ವೈಶಿಷ್ಟ್ಯಪೂರ್ಣ ಸ್ತಬ್ಧಚಿತ್ರಗಳ ಮೂಲಕವೇ ದೇಶದ ಗಮನ ಸೆಳೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಲೇ ಸಾಗಿದೆ. ಈ ಬಾರಿ ಕೃಷಿ, ಶಿಕ್ಷಣ, ವಿಜ್ಞಾನ, ಉನ್ನತ ತಂತ್ರಜ್ಞಾನ ಹಾಗೂ ಮೈಕ್ರೋಚಿಪ್‍ಗಳ ಉತ್ಪಾದನೆಯಲ್ಲಿ ಸಾಧಿಸಿರುವ ಸಮತೋಲನಯುತ ಪ್ರಗತಿಯನ್ನು ಸ್ತಬ್ಧಚಿತ್ರದ ಮೂಲಕ ತೋರಿಸಲಾಗ್ತಿದೆ. ಸಿರಿಧಾನ್ಯಗಳ ಉತ್ಪಾದನೆ ಮತ್ತು ಪೌಷ್ಟಿಕ ಆಹಾರದ ಬಳಕೆಯನ್ನು ಉತ್ತೇಜಿಸುವಲ್ಲಿ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಂಗಳೂರು ಜಾಗತಿಕವಾಗಿ ಗಮನ ಸೆಳೆದಿದೆ. ಮೈಕ್ರೋಚಿಪ್, ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ವಲಯಗಳಲ್ಲಿನ ಆವಿಷ್ಕಾರಗಳು ಕರ್ನಾಟಕವನ್ನು ಶ್ರೇಷ್ಠ ತಂತ್ರಜ್ಞಾನ ಕೇಂದ್ರವಾಗಿಸಿದೆ. ಇವೆಲ್ಲವೂ ಈ ಬಾರಿ ಸ್ತಬ್ಧಚಿತ್ರದಲ್ಲಿ ಮೇಳೈಸಲಿವೆ.

2026ರ ಜನವರಿ 26ರಂದು ನಡೆಯುವ ದೆಹಲಿ ಗಣರಾಜ್ಯೋತ್ಸವದ ಸ್ತಬ್ಧಚಿತ್ರಕ್ಕಾಗಿ ಇಲಾಖೆಯು ಕಿತ್ತೂರು ರಾಣಿ ಚೆನ್ನಮ್ಮ ಮತ್ತು ರಾಣಿ ಅಬ್ಬಕ್ಕದೇವಿ, ಕರ್ನಾಟಕ ಪುಷ್ಪ ವೈಭವ, ಹಲಗಲಿ ಬೇಡರು, ಸಿರಿಧಾನ್ಯದಿಂದ ಮೈಕ್ರೋಚಿಪ್​​ವರೆಗೆ ಎಂಬ ನಾಲ್ಕು ವಿಷಯಗಳನ್ನು ಆಯ್ಕೆ ಮಾಡಿ ಕಳುಹಿಸಿತ್ತು. ಆ ಪೈಕಿ ಮೊದಲ ಸಭೆಯಲ್ಲಿಯೇ ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ ಎಂಬ ವಿಷಯವನ್ನು ಪರಿಣತರ ಸಮಿತಿಯು ಒಮ್ಮತದಿಂದ ಅಂತಿಮಗೊಳಿಸಿತ್ತು.

ಸ್ತಬ್ಧಚಿತ್ರದಲ್ಲಿ ಏನಿರಲಿದೆ?

ಸ್ತಬ್ಧಚಿತ್ರದ ಮುಂಭಾಗದಲ್ಲಿ ಉದಯಿಸುತ್ತಿರುವ ಸೂರ್ಯ ನಿರಂತರ ಪ್ರಗತಿ ಮತ್ತು ಚಲನಶೀಲತೆಯ ಸಂಕೇತವಾಗಿ ಹೊಳೆಯುತ್ತಿರಲಿದೆ. ದೊಡ್ಡ ಮಡಿಕೆಗಳಲ್ಲಿ ಪ್ರದರ್ಶಿಸಲಾದ ವಿವಿಧ ಸಿರಿಧಾನ್ಯಗಳು ಕೃಷಿ ಸಮೃದ್ಧಿಯನ್ನು ತೋರಿಸಲಿವೆ. ಬೆಳೆದ ಫಸಲನ್ನು ಎತ್ತಿಹಿಡಿದಿರುವ ರೈತ, ಆತನ ಪತ್ನಿ ಹಾಗೂ ಉಲ್ಲಾಸದಿಂದ ಕಾಣಿಸುತ್ತಿರುವ ಮಕ್ಕಳು ಗ್ರಾಮೀಣ ಶಕ್ತಿಯ ಜೀವಂತ ಚಿತ್ರಣವಾಗಿದ್ದಾರೆ. ಮಧ್ಯಭಾಗದಲ್ಲಿ ತಿರುಗುತ್ತಿರುವ ಅಣುವಿನ ಮಾಲಿಕ್ಯೂಲ್‍ಗಳ ಮಾದರಿ ತಂತ್ರಜ್ಞಾನ ಪ್ರಗತಿಯನ್ನು ಸೂಚಿಸುತ್ತದೆ. ಕೃತಕ ಬುದ್ಧಿಮತ್ತೆಯ ರೋಬೋಟ್ ಕಂಪ್ಯೂಟರ್​​ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಭವಿಷ್ಯದ ಆವಿಷ್ಕಾರಗಳ ಸಂಕೇತವಾಗಿದೆ.

ಇಕ್ಕೆಲಗಳಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಪ್ರತಿನಿಧಿಸುವ ರಾಕೆಟ್ ಮತ್ತು ವಿಜ್ಞಾನಿ, ಟೆಲಿಮೆಡಿಸಿನ್ ಮೂಲಕ ಮಾರ್ಗದರ್ಶನ ನೀಡುತ್ತಿರುವ ವೈದ್ಯೆ ಹಾಗೂ ಕೃಷಿಭೂಮಿಯಲ್ಲಿ ಡ್ರೋನ್ ಬಳಸುತ್ತಿರುವ ಮಹಿಳೆಯು ವಿಜ್ಞಾನ, ಆರೋಗ್ಯ ಮತ್ತು ಆಧುನಿಕ ಕೃಷಿಯ ಸಮನ್ವಯವನ್ನು ತೋರಿಸುತ್ತಾರೆ. ಕೈಗಾರಿಕಾ ವಲಯವನ್ನು ಪ್ರತಿನಿಧಿಸುವಂತೆ ಯಂತ್ರೋಪಕರಣಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಉತ್ಪಾದನಾ ಶಕ್ತಿಗೆ ಸಾಕ್ಷಿಯಾಗಿದ್ದಾರೆ. ಇಡೀ ಸ್ತಬ್ಧಚಿತ್ರದ ಆಕರ್ಷಣೆಯ ಕೇಂದ್ರಬಿಂದುವಾಗಿ ಕೊನೆಯಲ್ಲಿ ಮಿನುಗುತ್ತಿರುವ ಮೈಕ್ರೋಚಿಪ್ ಹಾಗೂ ಬಂಗಾರದ ಬಣ್ಣದ ಸರ್ಕ್ಯೂಟ್‍ಗಳ ಮಧ್ಯೆ ರೋಬೋಟ್‍ನ ಮುಖವನ್ನು ಸಾಂಕೇತಿಕವಾಗಿ ಚಿತ್ರಿಸಲಾಗಿದೆ. ಇದು ಪರಂಪರೆಯಿಂದ ಪ್ರಗತಿಯತ್ತ, ಮಣ್ಣಿನಿಂದ ಯಂತ್ರಗಳತ್ತ ಸಾಗುತ್ತಿರುವ ಕರ್ನಾಟಕದ ಆತ್ಮನಿರ್ಭರ ಪಯಣದ ಸಾರವಾಗಿದೆ ಎಂದು ಇಲಾಖೆ ತಿಳಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *