ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಝೋನ್ನಲ್ಲಿ ಕಾಮಗಾರಿ.
ಚಿಕ್ಕಮಗಳೂರು : ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ನಡೆಯುತ್ತಿರುವ ಆರೋಪ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ನ ಪ್ರಭಾವಿ ಮುಖಂಡನೊಬ್ಬರು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಪಶ್ಚಿಮ ಘಟ್ಟಗಳ ಸಾಲಿನ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಚಿಕ್ಕಮಗಳೂರು ತಾಲೂಕಿನ ಕೊಳಗಾವೆ ಗ್ರಾಮದ ಸರ್ವೆ ನಂಬರ್ 58ರಲ್ಲಿ ಕಾಮಗಾರಿ ನಡೆಯುತ್ತಿದ್ದು, ಈ ಪ್ರದೇಶವನ್ನು 2011ರಲ್ಲಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಝೋನ್ ಎಂದು ಘೋಷಿಸಲಾಗಿದೆ. ಇದು ಪರಿಸರ ಸೂಕ್ಷ್ಮ ಪ್ರದೇಶವೂ ಆಗಿರುವುದರಿಂದ ಇಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಕಠಿಣ ನಿರ್ಬಂಧಗಳಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಭದ್ರಾ ವೈಲ್ಡ್ ಲೈಫ್ ವಿಭಾಗದ ಡಿಎಫ್ಒ ಪುಲ್ಕಿತ್, ಈ ಕಾಮಗಾರಿ ಬಫರ್ ವ್ಯಾಪ್ತಿಗೆ ಬರುತ್ತದೆ. ನಮ್ಮ ಸಿಬ್ಬಂದಿಯಿಂದ ವರದಿ ಕೇಳಿದ್ದೇನೆ. ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ವರದಿ ಬಂದ ಬಳಿಕ ಸುಪ್ರೀಂ ಕೋರ್ಟ್ ಸೂಚನೆ ಹಾಗೂ ಎನ್ಟಿಸಿಎ (NTCA) ಮಾರ್ಗಸೂಚಿಗಳ ಪ್ರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಚಿಕ್ಕಮಗಳೂರು ವೃತ್ತದ ಸಿಸಿಎಫ್ ಯಶ್ ಪಾಲ್ ಮಾತನಾಡಿ, ಅರಣ್ಯ ಇಲಾಖೆಯಿಂದ ಯಾವುದೇ ಎನ್ಒಸಿ ನೀಡಿಲ್ಲ. ಬಫರ್ ಝೋನ್ ಹಾಗೂ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಅವಕಾಶವಿಲ್ಲ. ನಮಗೆ ಈ ಬಗ್ಗೆ ಮಾಹಿತಿ ಬಂದಿದ್ದು, ಕಾನೂನು ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
For More Updates Join our WhatsApp Group :




