ಬಡವ–ದಣಿಗಳ ಸಂಘರ್ಷದ ರೆಟ್ರೋ ಕಥೆ ಹೇಳುವ ದುನಿಯಾ ವಿಜಯ್ ಸಿನಿಮಾ
ನಿರ್ದೇಶಕ ಜಡೇಶ್ ಕೆ. ಹಂಪಿ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಬ್ಲಾಕ್ ಬಸ್ಟರ್ ಹಿಟ್ ಆದ ‘ಕಾಟೇರ’ ಸಿನಿಮಾದ ಕಥೆ, ಚಿತ್ರಕಥೆಯಲ್ಲಿ ನಿರ್ದೇಶಕ ತರುಣ್ ಸುಧೀರ್ ಜೊತೆ ಜಡೇಶ್ ಕೈ ಜೋಡಿಸಿದ್ದರು. ಈಗ ಜಡೇಶ್ ಅವರ ನಿರ್ದೇಶನದಲ್ಲಿ ‘ಲ್ಯಾಂಡ್ಲಾರ್ಡ್’ ಸಿನಿಮಾ ಮೂಡಿಬಂದಿದೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ರಚಿತಾ ರಾಮ್, ರಾಜ್ ಬಿ. ಶೆಟ್ಟಿ, ರಿತನ್ಯಾ ವಿಜಯ್, ಶಿಶಿರ್ ಬೈಕಾಡಿ, ಉಮಾಶ್ರೀ ಮುಂತಾದವರು ನಟಿಸಿದ್ದಾರೆ. ಕೆ.ವಿ. ಸತ್ಯಪ್ರಕಾಶ್ ಮತ್ತು ಹೇಮಂತ್ ಗೌಡ ಕೆ.ಎಸ್. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ಲ್ಯಾಂಡ್ಲಾರ್ಡ್’ ಸಿನಿಮಾದ ವಿಮರ್ಶೆ ಇಲ್ಲಿದೆ..
‘ಲ್ಯಾಂಡ್ಲಾರ್ಡ್’ ಸಿನಿಮಾದ ಟ್ರೇಲರ್ ಬಿಡುಗಡೆ ಆದಾಗಲೇ ಅದರಲ್ಲಿ ‘ಕಾಟೇರ’ ಸಿನಿಮಾದ ಶೇಡ್ ಕಾಣಿಸಿತ್ತು. ಹೌದು, ಈ ಸಿನಿಮಾದಲ್ಲಿ ಅದೇ ರೀತಿಯ ಛಾಯೆ ಇದೆ. ಬಡವ ಮತ್ತು ಶ್ರೀಮಂತರ ನಡುವಿನ ಸಂಘರ್ಷ ಇದೆ. ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಬಡವನ ಕಥೆ ಇದೆ. ಜಾತಿಯ ಹೆಸರಿನಲ್ಲಿ ಶೋಷಣೆಗೆ ಒಳಗಾದ ಜನರ ಕಹಾನಿ ಇದೆ. ರೆಟ್ರೋ ಕಾಲದ ಕಥೆಯನ್ನು ಪ್ರೇಕ್ಷಕರ ಮುಂದೆ ಇಡಲಾಗಿದೆ.
ಇಡೀ ಊರಿಗೆ ಊರೇ ದಣಿಗಳ ಒಡೆತನದಲ್ಲಿ ಇರುವಾಗ, ತನ್ನ ಪಾಲಿಗೂ ಸ್ವಂತದ ತುಂಡು ಭೂಮಿ ಇರಬೇಕು ಎಂಬುದು ಬಡವನ ಆಸೆ. ಆ ಆಸೆಯನ್ನು ಈಡೇರಿಸುವುದು ದಣಿಗಳ ಪಾಲಿಗೆ ದೊಡ್ಡ ವಿಷಯ ಏನೂ ಅಲ್ಲ. ಆದರೆ ಬಡವರಿಗೆ ಭೂಮಿ ಕೊಟ್ಟರೆ ಅವರು ಕೂಡ ‘ಲ್ಯಾಂಡ್ಲಾರ್ಡ್’ ಎನಿಸಿಕೊಳ್ಳುತ್ತಾರೆ. ಅದರಿಂದ ತಮ್ಮ ಪ್ರತಿಷ್ಠೆಗೆ ಧಕ್ಕೆ ಬರುತ್ತದೆ ಎಂಬುದು ದಣಿಗಳ ವಾದ. ಹಾಗಾಗಿ, ಎಂದೆಂದಿಗೂ ಬಡವರಿಗೆ ಭೂಮಿಯ ಒಡೆತನ ಸಿಗಲೇಬಾರದು ಎಂದು ದಣಿಗಳು ಕುತಂತ್ರ ನಡೆಸುತ್ತಾರೆ. ಅಂಥ ದಣಿಗಳ ವಿರುದ್ಧ ಸಿಡಿದು ನಿಲ್ಲುವ ರಾಚಯ್ಯ ಅಲಿಯಾಸ್ ಕೊಡಲಿ ರಾಚಯ್ಯ ಎಂಬ ಬಡವನ ಕಥೆ ಈ ಸಿನಿಮಾದಲ್ಲಿ ಇದೆ.
ನಟ ದುನಿಯಾ ವಿಜಯ್ ಅವರು ಕೊಡಲಿ ರಾಚಯ್ಯನಾಗಿ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಆ ಪಾತ್ರಕ್ಕೆ ಅವರು ನ್ಯಾಯ ಒದಗಿಸಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಅಬ್ಬರಿಸಿದ್ದಾರೆ. ಕೋಲಾರ ಭಾಗದ ಕನ್ನಡವನ್ನು ಮಾತನಾಡುತ್ತಾ ಆ ಪಾತ್ರವೇ ತಾವಾಗಿದ್ದಾರೆ. ದುನಿಯಾ ವಿಜಯ್ ಅವರಿಗೆ ಜೋಡಿಯಾಗಿ ರಚಿತಾ ರಾಮ್ ಅಭಿನಯಿಸಿದ್ದಾರೆ. ದಿಟ್ಟ ಹೆಣ್ಣುಮಗಳಾಗಿ, ಡಿ-ಗ್ಲಾಮ್ ಪಾತ್ರವನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಮಗಳ ಪಾತ್ರದಲ್ಲಿ ನಟಿಸಿರುವ ರಿತನ್ಯಾ ಅವರು ಗಮನ ಸೆಳೆಯುತ್ತಾರೆ.
For More Updates Join our WhatsApp Group :



