ರಾಜ್ಯಪಾಲರ ಆಕ್ಷೇಪದ ಬೆನ್ನಲ್ಲೇ ಸರ್ಕಾರದ ಎಚ್ಚರಿಕೆ.
ಬೆಂಗಳೂರು: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಆಕ್ಷೇಪದ ಬೆನ್ನಲ್ಲೇ ರಾಜ್ಯ ಸರ್ಕಾರ ಗಣರಾಜ್ಯೋತ್ಸವ ಭಾಷಣದ ವಿಷಯದಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ರಾಜ್ಯಪಾಲರಿಗೆ ಸಿದ್ಧಪಡಿಸಿದ್ದ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ ಯಾವುದೇ ಅಂಶಗಳನ್ನು ಈ ಬಾರಿ ಸೇರಿಸಲಾಗಿಲ್ಲ. ಪರಿಣಾಮವಾಗಿ, ಯಾವುದೇ ವಿವಾದವಿಲ್ಲದೆ ರಾಜ್ಯಪಾಲರು ನಿರಾತಂಕವಾಗಿ ಸಂಪೂರ್ಣ ಭಾಷಣವನ್ನು ಓದಿದರು. ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಗಣರಾಜ್ಯೋತ್ಸವ ಸಮಾರಂಭದ ವೇದಿಕೆಯಾಗುತ್ತಾ ಎಂಬ ಅನುಮಾನಗಳು ಹುಸಿಯಾದವು.
ಇತ್ತೀಚೆಗೆ ನಡೆದ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳಿದ್ದ ಭಾಷಣದ ಅಂಶಗಳನ್ನು ತೆಗೆದುಹಾಕುವಂತೆ ರಾಜ್ಯಪಾಲರು ಸೂಚಿಸಿದ್ದರು. ಆದರೆ ಆ ವೇಳೆ ಸರ್ಕಾರ ಪಟ್ಟು ಬಿಡದ ಕಾರಣ, ರಾಜ್ಯಪಾಲರು ಭಾಷಣದ ಮೊದಲ ಮತ್ತು ಕೊನೆಯ ಸಾಲುಗಳನ್ನು ಮಾತ್ರ ಓದಿ ಸಭಾಂಗಣ ತೊರೆದಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ, ಗಣರಾಜ್ಯೋತ್ಸವ ಭಾಷಣದಲ್ಲಿ ಕೇಂದ್ರದ ವಿರುದ್ಧ ಟೀಕೆಗಳಿದ್ದರೆ ತಾವು ಸರ್ಕಾರ ಸಿದ್ಧಪಡಿಸಿದ ಭಾಷಣವನ್ನೇ ಓದುವುದಿಲ್ಲ ಎಂದು ರಾಜ್ಯಪಾಲರು ಎಚ್ಚರಿಕೆ ನೀಡಿದ್ದರು.
ಈ ಹಿನ್ನೆಲೆ ಗಮನದಲ್ಲಿಟ್ಟುಕೊಂಡು, ಈ ಬಾರಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ರಾಜ್ಯದ ಸಾಧನೆಗಳು, ಸಂವಿಧಾನ ಮೌಲ್ಯಗಳು, ಜನಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳನ್ನಷ್ಟೇ ಭಾಷಣದಲ್ಲಿ ಸೇರಿಸಿದೆ.
ರಾಜ್ಯಪಾಲರ ಭಾಷಣದ ಮುಖ್ಯಾಂಶಗಳು
- ಈ ದಿನ ಹೊಸ ಭಾರತದ ಸಂವಿಧಾನ ಜಾರಿಗೆ ಬಂದ ಐತಿಹಾಸಿಕ ದಿನ
- ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಾನತೆ ಘೋಷಣೆಯ ಮಹತ್ವ
- ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಕೊಡುಗೆಗಳಿಗೆ ಗೌರವ
- ರಾಜ್ಯ ಸರ್ಕಾರ ವಿವಿಧ ನೇಮಕಾತಿಗಳಲ್ಲಿ ಹಿಂದುಳಿದ ಮತ್ತು ಅಲಕ್ಷಿತ ಸಮುದಾಯಗಳಿಗೆ ಪ್ರಾಧಾನ್ಯತೆ ನೀಡಿದೆ.
- ಜನಕಲ್ಯಾಣ ಯೋಜನೆಗಳಿಗೆ ವರ್ಷಕ್ಕೆ 1.12 ಲಕ್ಷ ಕೋಟಿ ರೂ. ಮತ್ತು ಗ್ಯಾರಂಟಿ ಯೋಜನೆಗಳಿಗೆ 1.13 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
- ಮಹಿಳೆಯರ ಸುರಕ್ಷತೆಯಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.
ಅಭಿವೃದ್ಧಿ ಮತ್ತು ಹೂಡಿಕೆ ಬಗ್ಗೆ ರಾಜ್ಯಪಾಲರು ಹೇಳಿದ್ದೇನು?
2025-26ರ ಬಜೆಟ್‌ನಲ್ಲಿ ಬಂಡವಾಳ ವೆಚ್ಚಗಳಿಗೆ 83,200 ಕೋಟಿ ರೂ. ಮೀಸಲಿಡಲಾಗಿದೆ. ಬೆಂಗಳೂರಿನಲ್ಲಿ ಸುಮಾರು 1.5 ಲಕ್ಷ ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸೆಮಿಕಂಡಕ್ಟರ್, ಏರೋಸ್ಪೇಸ್, ಕ್ವಾಂಟಮ್ ತಂತ್ರಜ್ಞಾನ ಸೇರಿದಂತೆ ಉನ್ನತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚುತ್ತಿದೆ ಎಂದು ರಾಜ್ಯಪಾಲರು ತಿಳಿಸಿದರು.
ಕಂದಾಯ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಶೇ.80ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. 91,163 ಫೋಡಿಗಳು ಪೂರ್ಣಗೊಂಡಿದ್ದು, 4,050 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದೆ. 1.11 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಬಿ-ಖಾತಾಗಳನ್ನು ಎ-ಖಾತಾಗಳಾಗಿ ಪರಿವರ್ತಿಸಲು ಅನುಮೋದನೆ ನೀಡಲಾಗಿದೆ.
ರಾಜ್ಯವು ದೇಶದಲ್ಲೇ ಅತಿದೊಡ್ಡ ಶಿಕ್ಷಣ ಕೇಂದ್ರವಾಗಿ ರೂಪುಗೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೇಜಿ ತರಗತಿಗಳನ್ನು ಆರಂಭಿಸಲಾಗುತ್ತಿದೆ. 9.07 ಲಕ್ಷ ಹಾಲು ಉತ್ಪಾದಕರಿಗೆ 4,130 ಕೋಟಿ ರೂ. ಪ್ರೋತ್ಸಾಹ ಧನವನ್ನು ನೇರವಾಗಿ ವರ್ಗಾವಣೆ ಮಾಡಲಾಗಿದೆ.
ರೈತಪರ ಮತ್ತು ಸಾಮಾಜಿಕ ನ್ಯಾಯ: ಗೆಹ್ಲೋಟ್
ದೇವನಹಳ್ಳಿ ರೈತರ ಭೂಸ್ವಾಧೀನ ಕೈಬಿಡಲಾಗಿದೆ. ಎಸ್‌ಸಿಎಸ್‌ಪಿ–ಟಿಎಸ್‌ಪಿ, ಬಡ್ತಿ ಮೀಸಲಾತಿ, ಒಳ ಮೀಸಲಾತಿ ಸೇರಿದಂತೆ ಪರಿಶಿಷ್ಟ ಸಮುದಾಯಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗಿದೆ. ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರು ಮತ್ತು ರೈತರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಭಾಷಣದಲ್ಲಿ ತಿಳಿಸಲಾಗಿದೆ.
For More Updates Join our WhatsApp Group :




