ಹಾಲು ಸೇವನೆ ಮಾಡುವುದರಿಂದ ಅಲರ್ಜಿ ಉಂಟಾಗುವ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆಯೆ?
ಇತ್ತೀಚಿನ ದಿನಗಳಲ್ಲಿ, ಹಾಲು ಸೇವನೆ ಮಾಡುವುದರಿಂದ ಅಲರ್ಜಿ ಉಂಟಾಗುವ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಅನೇಕರು ಹಾಲು ಕುಡಿದ ನಂತರ ಹೊಟ್ಟೆ ನೋವು, ವಾಂತಿ, ಚರ್ಮದ ದದ್ದುಗಳು ಅಥವಾ ಉಸಿರಾಟದ ತೊಂದರೆ, ಹೀಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ಇಂತಹ ಸಂದರ್ಭಗಳಲ್ಲಿ, ಹಾಲು ಸೇವನೆ ಮಾಡುವುದರಿಂದ ಅಲರ್ಜಿ ಉಂಟಾಗುತ್ತಿದ್ದರೆ ಮೊಸರು ತಿನ್ನುವುದನ್ನು ಕೂಡ ನಿಲ್ಲಿಸಬೇಕೇ ಎಂಬ ಗೊಂದಲ ಕೆಲವರಲ್ಲಿರುತ್ತದೆ. ವಾಸ್ತವವಾಗಿ, ಮೊಸರನ್ನು ಹಾಲಿನಿಂದ ತಯಾರಿಸಲಾಗುತ್ತದೆಯಾದರೂ ಅದನ್ನು ತಯಾರಿಸುವ ಪ್ರಕ್ರಿಯೆಯು ವಿಭಿನ್ನವಾಗಿರುತ್ತದೆ. ಆದರೂ ಕೂಡ ಹಾಲಿನಿಂದ ಅಲರ್ಜಿ ಇರುವವರು ಮೊಸರು ಸೇವನೆ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ, ಮೊಸರು ತಿನ್ನುವುದನ್ನು ಬಿಡಬೇಕೇ ಎಂಬ ಮಾಹಿತಿ ತಿಳಿದುಕೊಳ್ಳಿ.
ಹಾಲಿನಿಂದ ಅಲರ್ಜಿ ಇರುವವರು ಮೊಸರು ತಿನ್ನುವುದನ್ನು ಬಿಡಬೇಕೆ?
ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಈ ಪ್ರಶ್ನೆಗೆ ಉತ್ತರ ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಏಕೆಂದರೆ ಹಾಲಿನ ಅಲರ್ಜಿ ಸಾಮಾನ್ಯವಾಗಿ ಹಾಲಿನಲ್ಲಿರುವ ಪ್ರೋಟೀನ್‌ಗಳಿಂದ ಉಂಟಾಗುತ್ತದೆ, ಆದರೆ ಮೊಸರು ಸೇವನೆ ಮಾಡುವುದರಿಂದ ಹಾಗಾಗಬೇಕು ಎಂಬುದಿಲ್ಲ. ಅದಕ್ಕಾಗಿಯೇ ಅನೇಕರಿಗೆ ಹಾಲು ಕುಡಿಯುವುದರಿಂದ ಸಮಸ್ಯೆಯಾಗುತ್ತದೆ, ಆದರೆ ಮೊಸರು ಸೇವನೆಯಿಂದ ದೇಹದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಆಗವುದಿಲ್ಲ. ಆದರೆ ಕೆಲವು ಸಂದರ್ಭದಲ್ಲಿ ಹಾಲಿನ ಪ್ರೋಟೀನ್‌ಗಳಿಂದ ತೀವ್ರ ಅಲರ್ಜಿ ಇರುವವರಿಗೆ, ಮೊಸರು ತಿನ್ನುವುದರಿಂದ ಅಲರ್ಜಿಯ ಪ್ರತಿಕ್ರಿಯೆಗಳು ಕಂಡುಬರಬಹುದು. ಹೊಟ್ಟೆ ನೋವು, ತುರಿಕೆ, ಊತ ಅಥವಾ ಉಸಿರಾಟದ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ಹಾಲಿಗೆ ಅಲರ್ಜಿ ಇರುವ ಎಲ್ಲರಿಗೂ ಮೊಸರು ಸುರಕ್ಷಿತ ಎಂದು ಹೇಳುವುದು ತಪ್ಪು. ಮೊಸರು ಸೇವಿಸುವುದು ಪ್ರಯೋಜನಕಾರಿಯೇ ಅಥವಾ ಇಲ್ಲವೇ ಎಂಬುದನ್ನು ದೇಹದ ಪ್ರತಿಕ್ರಿಯೆಯನ್ನು ಗಮನಿಸುವ ಮೂಲಕ ಮಾತ್ರ ನಿರ್ಧರಿಸಬಹುದು.
ಈ ಸಮಸ್ಯೆಯನ್ನು ತಡೆಯಲು ಏನು ಮಾಡಬಹುದು?
ಹಾಲಿನ ಅಲರ್ಜಿ ಇದ್ದರೆ, ನಿಮ್ಮ ಆಹಾರದಲ್ಲಿ ಮೊಸರನ್ನು ನೇರವಾಗಿ ಸೇವನೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಮೊದಲ ಬಾರಿಗೆ, ಮೊಸರನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸಿ, ಆ ಬಳಿಕ ದೇಹದ ಪ್ರತಿಕ್ರಿಯೆಯನ್ನು ಗಮನಿಸಿ. ಅಸ್ವಸ್ಥತೆ ಕಂಡುಬಂದರೆ, ತಕ್ಷಣ ಮೊಸರು ಸೇವನೆ ಮಾಡುವುದನ್ನು ನಿಲ್ಲಿಸಿ. ಸೋಯಾ ಅಥವಾ ತೆಂಗಿನಕಾಯಿಯಿಂದ ತಯಾರಿಸಿದ ಮೊಸರುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅದನ್ನು ಕೂಡ ಸೇವನೆ ಮಾಡಬಹುದು. ಹಾಲು ಅಥವಾ ಮೊಸರಿಗೆ ಸಂಬಂಧಿಸಿದ ಅಲರ್ಜಿಯನ್ನು ಲಘುವಾಗಿ ಪರಿಗಣಿಸಬಾರದು. ಹಾಗಾಗಿ ಸರಿಯಾದ ರೋಗನಿರ್ಣಯಕ್ಕೆ ಅಲರ್ಜಿ ಪರೀಕ್ಷೆ ಮತ್ತು ವೈದ್ಯರ ಸಲಹೆ ಅಗತ್ಯ. ವೈದ್ಯರು ನಿಮ್ಮ ಅಲರ್ಜಿಯ ಪ್ರಕಾರವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಸರಿಯಾದ ಆಹಾರ ಸೇವನೆಯ ಬಗ್ಗೆ ಸಲಹೆ ನೀಡಬಹುದು.
For More Updates Join our WhatsApp Group :




