ಬಂಗಾರದ ನಗರಿಯಲ್ಲಿ ಹೂವಿನ ಹಬ್ಬ.

ಬಂಗಾರದ ನಗರಿಯಲ್ಲಿ ಹೂವಿನ ಹಬ್ಬ.

ಫಲಪುಷ್ಪ ಪ್ರದರ್ಶನಕ್ಕೆ ಮಾರುಹೋದ ಜನಸಾಗರ

ಕೋಲಾರ : ತೋಟಗಾರಿಕೆ ಮತ್ತು ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ಮೂರು ದಿನಗಳ ಫಲಪುಷ್ಪ ಪ್ರದರ್ಶನ, ಸಿರಿಧಾನ್ಯ ಮತ್ತು ಸಾವಯವ ಮೇಳ ನೋಡುಗರನ್ನು ಪುಳಕಗೊಳಿಸಿದೆ. ಹೂವು ಮತ್ತು ಹಣ್ಣುಗಳಲ್ಲಿ ಅರಳಿದ ಸುಂದರ ಕಲಾಕೃತಿಗಳು ಮನಸೂರೆಗೊಂಡಿದ್ದು, ಕಲ್ಲಂಗಡಿಯಲ್ಲಿ ಮೂಡಿದ ವಿವಿಧ ಸೆಲೆಬ್ರಿಟಿಗಳ ಚಿತ್ರಗಳು ನೋಡುಗರನ್ನು ವಿಶೇಷವಾಗಿ ಆಕರ್ಷಿಸಿವೆ.

ಹೂವಿನಲ್ಲಿ ನಿರ್ಮಾಣ ಮಾಡಿರುವ ಹಸು-ಕರು ಶಿಲ್ಪ, ಸಾಲುಮರದ ತಿಮ್ಮಕ್ಕ ಅವರ ಮರಳು ಶಿಲ್ಪ, ರಂಗೋಲಿಯಲ್ಲಿ ಅರಳಿರುವ ಗಣ್ಯರ ಚಿತ್ರಗಳು ನೋಡುಗರ ಕಣ್ಮನ ಸೆಳೆದಿವೆ. ಇತ್ತೀಚೆಗೆ ಬಿಗ್ ಬಾಸ್​​ನಲ್ಲಿ ಗೆಲುವು ಸಾಧಿಸಿದ ಗಿಲ್ಲಿನಟ, ಕ್ರಿಕೆಟ್ ತಾರೆಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರ ಕಲಾಕೃತಿಗಳಿಗೆ ಸಾರ್ವಜನಿಕರು ಫಿದಾ ಆಗಿದ್ದಾರೆ.

ಮೂರು ದಿನ ನಡೆಯುತ್ತಿರುವ ಈ ಫಲಪುಷ್ಪ ಪ್ರದರ್ಶನವನ್ನು ಎಲ್ಲ ವಯೋಮಾನದವರ ಅಭಿರುಚಿಗೆ ಅನುಗುಣವಾಗಿ ಆಯೋಜಿಸಲಾಗಿದೆ. ರೈತರಿಗೆ ರೇಷ್ಮೆ ಕೃಷಿ, ಸಾವಯವ ಕೃಷಿ, ಮೀನು ಕೃಷಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುವ ಮಾಹಿತಿಯನ್ನೂ ಇಲ್ಲಿ ನೀಡಲಾಗ್ತಿದೆ. ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸುವ ವಿವಿಧ ಫೋಟೋಗಳನ್ನು ಒಂದೇ ಸೂರಿನಡಿ ಇಡಲಾಗಿದೆ.

ಇನ್ನು ಮಹಿಳೆಯರು ಮತ್ತು ಯುವತಿಯರಿಗೆ ಹೆಚ್ಚು ಇಷ್ಟವಾಗುವ ಹೂವು ಹಾಗೂ ತೆಂಗಿನ ಗರಿಗಳಿಂದ ಮಾಡಲಾದ ವಿವಿಧ ಕಲಾಕೃತಿಗಳನ್ನು ಇಲ್ಲಿ ನೋಡಬಹುದಾಗಿದೆ. ವಿಶೇಷವಾಗಿ ಬಗೆ ಬಗೆಯ ಬಣ್ಣದ ಹೂಗಳು ನೋಡುಗರನ್ನು ಆಕರ್ಷಿಸುತ್ತಿದ್ದು, ಅಪರೂಪದ ಹಣ್ಣುಗಳು ಕೂಡ ಸಾರ್ವಜನಿಕರ ಕುತೂಹಲ ಹೆಚ್ಚಿಸಲಿವೆ.

ತೋಟಗಾರಿಕಾ ಇಲಾಖೆಯ ಈ ಅದ್ಬುತವಾದ ಫಲಪುಷ್ಟ ಪ್ರದರ್ಶನ ನಿಜಕ್ಕೂ ಜಿಲ್ಲೆಯ ಜನರಿಗೆ ಮೂರು ದಿನಗಳ ಕಾಲ ಭರಪೂರ ಮನೋರಂಜನೆ ಜೊತೆಗೆ ಮಾಹಿತಿ ನೀಡುವ ಕೆಲಸವನ್ನೂ ಮಾಡುತ್ತಿದೆ. ಅಪರೂಪದ ಹೂ, ಹಣ್ಣುಗಳನ್ನು ಕಣ್ತುಂಬಿಕೊಳ್ಳಲು ಅವಕಾಶ ಒದಗಿಸಿರುವ ಇಲಾಖೆಯ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆಯೂ ಕೇಳಿಬಂದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *