ಮಕ್ಕಳಿಗೆ ಹಾಲು ನೀಡುವ ಸರಿಯಾದ ವಯಸ್ಸು ಏನು ಹೇಳುತ್ತಾರೆ ವೈದ್ಯರು?
ಒಂದು ಮನೆಯಲ್ಲಿ ಮಗು ಜನಿಸಿದ ಮೇಲೆ ಪೋಷಕರು ತಮ್ಮ ಮಗು ಸೇವಿಸುವ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕಾಗುತ್ತದೆ. ಆರಂಭಿಕ ವರ್ಷಗಳಲ್ಲಿ, ಮಗುವಿನ ದೇಹ ವೇಗವಾಗಿ ಬೆಳೆಯುತ್ತದೆ, ಆದ್ದರಿಂದ ಅವರು ಪಡೆಯುವ ಪೋಷಣೆ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಇಂತಹ ಸಮಯದಲ್ಲಿ, ಪೋಷಕರು ಹಸುವಿನ ಹಾಲನ್ನು ಯಾವಾಗ ನೀಡಲು ಪ್ರಾರಂಭಿಸಬೇಕು ಎಂಬ ಗೊಂದಲ ಆರಂಭವಾಗುತ್ತದೆ. ಇದು ಸಾಮಾನ್ಯವಾಗಿದ್ದರೂ ಕೂಡ ಈ ಬಗ್ಗೆ ಸರಿಯಾದ ಮಾಹಿತಿ ಪಡೆಯುವುದು ಅನಿವಾರ್ಯವಾಗುತ್ತದೆ. ಹಸುವಿನ ಹಾಲು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಇತರ ಅಗತ್ಯ ಅಂಶಗಳನ್ನು ಹೊಂದಿರುತ್ತದೆ. ಆದರೆ ಈ ಪೌಷ್ಟಿಕಾಂಶ ಪ್ರತಿ ವಯಸ್ಸಿನವರಿಗೂ ಸೂಕ್ತವಲ್ಲ. ಹೌದು, ಮಾಹಿತಿ ಕೊರತೆಯಿಂದ, ಜನ ತಮಗೆ ಅನಿಸಿದ್ದನ್ನು ಮಾಡುತ್ತಾರೆ. ಆದರೆ ಇದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಹಸುವಿನ ಹಾಲನ್ನು ಮಕ್ಕಳಿಗೆ ಯಾವ ವಯಸ್ಸಿನಲ್ಲಿ ನೀಡುವುದು ಸುರಕ್ಷಿತ ಮತ್ತು ಪ್ರಯೋಜನಕಾರಿ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
ಯಾವ ವಯಸ್ಸಿನಲ್ಲಿ ಮಗುವಿಗೆ ಹಸುವಿನ ಹಾಲು ಕುಡಿಯಲು ಕೊಡುವುದು ಉತ್ತಮ:
ಡಾ. ರಾಕೇಶ್ ಬಾಗ್ರಿ ಅವರು ಹೇಳುವ ಪ್ರಕಾರ, ಮಕ್ಕಳಿಗೆ 1 ವರ್ಷ ಪೂರ್ಣಗೊಂಡ ನಂತರವೇ ಹಸುವಿನ ಹಾಲನ್ನು ನೀಡಬೇಕು. ಈ ವಯಸ್ಸಿನಲ್ಲಿ, ಮಗುವಿನ ಜೀರ್ಣಾಂಗ ವ್ಯವಸ್ಥೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದ್ದು ಹಸುವಿನ ಹಾಲನ್ನು ಉತ್ತಮವಾಗಿ ಜೀರ್ಣಿಸಿಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. 1 ವರ್ಷದ ನಂತರ, ಮಗುವು ವಿಭಿನ್ನ ಪೋಷಕಾಂಶಗಳನ್ನು ಒದಗಿಸುವ ಘನ ಆಹಾರವನ್ನು ತಿನ್ನಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ, ಹಸುವಿನ ಹಾಲು ಅವರ ಆಹಾರದ ಭಾಗವಾಗಬಹುದು. ಆದರೆ ಮಗು ಇತರ ಅಗತ್ಯ ಆಹಾರಗಳನ್ನು ಸಹ ತಿನ್ನಲು ಸಾಧ್ಯವಾಗುವಂತೆ ಹಾಲಿನ ಪ್ರಮಾಣವನ್ನು ಮಿತಿಗೊಳಿಸುವುದು ಬಹಳ ಮುಖ್ಯ. ಈ ರೀತಿ ಸ್ವಲ್ಪ ಸ್ವಲ್ಪ ಹಾಲನ್ನು ನೀಡುವುದರಿಂದ ಮಗುವಿನ ದೇಹವು ಅದಕ್ಕೆ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ, ಪೌಷ್ಟಿಕಾಂಶದ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ.
1 ವರ್ಷದೊಳಗಿನ ಮಕ್ಕಳಿಗೆ ಹಸುವಿನ ಹಾಲನ್ನು ನೀಡಬಾರದು ಏಕೆ?
ಸಾಮಾನ್ಯವಾಗಿ 1 ವರ್ಷದೊಳಗಿನ ಮಕ್ಕಳಿಗೆ ಹಸುವಿನ ಹಾಲನ್ನು ನೀಡಬಾರದು, ಏಕೆಂದರೆ ಅವರ ಜೀರ್ಣಾಂಗ ವ್ಯವಸ್ಥೆಯು ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವುದಿಲ್ಲ. ಹಸುವಿನ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಮತ್ತು ಖನಿಜಗಳಿದ್ದು, ಇದನ್ನು ಚಿಕ್ಕ ಮಗು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ಇದರಿಂದ ಕೆಲವು ಮಕ್ಕಳಲ್ಲಿ ವಾಂತಿ, ಅತಿಸಾರ, ಅನಿಲ ಅಥವಾ ಹೊಟ್ಟೆ ನೋವಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಜೋತೆಗೆ ಹಸುವಿನ ಹಾಲು ಕಬ್ಬಿಣ ಅಂಶದ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತದೆ, ರಕ್ತಹೀನತೆಯ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವು ಮಕ್ಕಳಲ್ಲಿ ಇದರ ಅಲರ್ಜಿ ಕೂಡ ಕಂಡುಬರಬಹುದು. ಇನ್ನು, 1 ವರ್ಷದ ನಂತರ ಹಾಲನ್ನು ನೀಡುವಾಗ ಸ್ವಲ್ಪ ಸ್ವಲ್ಪವೇ ನೀಡಿ, ಮಗುವಿನ ಪ್ರತಿಕ್ರಿಯೆಯನ್ನು ಗಮನಿಸಿ. ಸೋಂಕಿನ ಅಪಾಯವನ್ನು ತಡೆಗಟ್ಟಲು ಯಾವಾಗಲೂ ಕುದಿಸಿ, ಆರಿಸಿದ ಹಾಲನ್ನು ನೀಡಿ. ಮಗುವಿನಲ್ಲಿ ಯಾವುದೇ ರೀತಿಯ ಜೀರ್ಣಕಾರಿ ಸಮಸ್ಯೆ, ಅಲರ್ಜಿ ಅಥವಾ ಅಸ್ವಸ್ಥತೆ ಕಂಡುಬಂದರೆ ವೈದ್ಯರ ಸಲಹೆ ಪಡೆಯುವುದನ್ನು ಮರೆಯಬೇಡಿ.
For More Updates Join our WhatsApp Group :




