ಈ ಬಯಕೆಯ ಹಿಂದಿದೆ ಆರೋಗ್ಯದ ಎಚ್ಚರಿಕೆ!
ಕೆಲವರಿಗೆ ಸಿಹಿತಿನಿಸುಗಳನ್ನು ಸೇವನೆ ಮಾಡುವುದು ಎಂದರೆ ತುಂಬಾ ಇಷ್ಟ. ಪ್ರತಿದಿನ ಊಟ, ತಿಂಡಿ ಮಾಡುವುದಕ್ಕಿಂತಲೂ ಮುಖ್ಯವಾಗಿ ಸಿಹಿಯಾದ ಆಹಾರಗಳ ಸೇವನೆ ಮಾಡಲು ಹಂಬಲಿಸುತ್ತಾರೆ. ಈ ರೀತಿ ಸಿಹಿ ತಿನ್ನುವ ಬಯಕೆ ಕ್ರಮೇಣ ದೈನಂದಿನ ಅವಶ್ಯಕತೆಯಂತೆ ಆಗಿಬಿಡುತ್ತದೆ. ಕೆಲವೊಮ್ಮೆ, ಊಟದ ನಂತರ ಅಥವಾ ತಿಂಡಿ ತಿನ್ನುವ ಮೊದಲು ಹೀಗೆ, ಸಮಯದ ಪರಿವಿಲ್ಲದೆ ಸ್ವೀಟ್ ತಿನ್ನಬೇಕು ಎಂದು ಅನಿಸುತ್ತದೆ. ಆರಂಭದಲ್ಲಿ, ಇದು ಸಾಮಾನ್ಯವೆಂದು ತೋರುತ್ತದೆಯಾದರೂ, ಪದೇ ಪದೇ ಈ ರೀತಿ ಆಸೆಯಾಗಲು ಪ್ರಾರಂಭಿಸಿದಾಗ, ಅದು ಕಳವಳಕಾರಿ ವಿಷಯವಾಗುತ್ತದೆ. ಹೌದು, ಸಿಹಿತಿಂಡಿಗಳನ್ನು ತಿನ್ನುವುದು ದೇಹಕ್ಕೆ ತಾತ್ಕಾಲಿಕವಾಗಿ ಮನಸ್ಸಿಗೆ ಶಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ, ಅದಕ್ಕಾಗಿಯೇ ಕೆಲವರು ಹೆಚ್ಚು ದಣಿವಾದಾಗ ಅಥವಾ ಒತ್ತಡದಲ್ಲಿದ್ದಾಗ ಸಿಹಿಯನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಅತಿಯಾದ ಸೇವನೆ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು. ಹಾಗಾದರೆ ಈ ರೀತಿಯ ಅಭ್ಯಾಸದಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ, ಈ ರೀತಿಯ ಬಯಕೆಯನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಹೆಚ್ಚೆಚ್ಚು ಸಿಹಿತಿಂಡಿ ತಿನ್ನಬೇಕೆಂಬ ಬಯಕೆಯಾಗುವುದಕ್ಕೆ ಕಾರಣವೇನು?
ಲೇಡಿ ಹಾರ್ಡಿಂಗ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಡಾ. ಎಲ್.ಎಚ್. ಘೋಟೇಕರ್ ಅವರು ಹೇಳುವ ಪ್ರಕಾರ, ಒಬ್ಬ ವ್ಯಕ್ತಿಗೆ ಪದೇ ಪದೇ ಸಿಹಿತಿಂಡಿ ತಿನ್ನಲು ಬಯಕೆಯಾಗುವುದು ಕೇವಲ ರುಚಿಗೆ ಮಾತ್ರವಲ್ಲ. ಹಲವರಿಗೆ, ಈ ಅಭ್ಯಾಸವು ಅವರ ದೈನಂದಿನ ದಿನಚರಿ ಮತ್ತು ಜೀವನಶೈಲಿಗೆ ಸಂಬಂಧಿಸಿರುತ್ತದೆ. ಅನಿಯಮಿತ ಆಹಾರ ಪದ್ಧತಿ, ದೀರ್ಘಕಾಲದವರೆಗೆ ಹಸಿವಿನಿಂದ ಇರುವುದು ಅಥವಾ ಹೆಚ್ಚು ಜಂಕ್ ಫುಡ್ ಸೇವಿಸುವುದು ಸಹ ಇದಕ್ಕೆ ಕಾರಣಗಳಾಗಿರಬಹುದು. ಅಷ್ಟೇ ಅಲ್ಲ, ಒತ್ತಡ, ನಿದ್ರೆಯ ಕೊರತೆ ಮತ್ತು ಮಾನಸಿಕ ಆಯಾಸ ಕೂಡ ಸಿಹಿ ತಿನ್ನಬೇಕೆಂಬ ಹಂಬಲವನ್ನು ಹೆಚ್ಚಿಸುತ್ತದೆ. ಕೆಲವರು, ದಣಿವಾದಾಗ ಕೂಡ ಸಿಹಿತಿಂಡಿಗಳ ಸೇವನೆ ಮಾಡುತ್ತಾರೆ. ಕಾಲಾನಂತರದಲ್ಲಿ, ಇದು ಅಭ್ಯಾಸವಾಗುತ್ತದೆ ಮತ್ತು ಸಿಹಿತಿಂಡಿಗಳಿಲ್ಲದೆ, ಆಗುವುದೇ ಎಲ್ಲ ಎಂಬ ಹಂತಕ್ಕೆ ಬರುತ್ತಾರೆ.
ಪದೇ ಪದೇ ಸಿಹಿತಿಂಡಿ ಸೇವನೆ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ?
ಸಿಹಿತಿಂಡಿಗಳನ್ನು ಪದೇ ಪದೇ ತಿನ್ನುವುದರಿಂದ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಉಂಟಾಗುತ್ತದೆ. ಇದು ತ್ವರಿತ ತೂಕ ಹೆಚ್ಚಾಗಲು ಮತ್ತು ಬೊಜ್ಜುತನಕ್ಕೆ ಕಾರಣವಾಗಬಹುದು. ಅಷ್ಟೇ ಅಲ್ಲ, ಹೆಚ್ಚು ಸಕ್ಕರೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಅಸಮತೋಲನಗೊಳ್ಳುತ್ತದೆ, ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಇದಲ್ಲದೆ, ಹಲ್ಲಿನಲ್ಲಿ ಹುಳುಕು, ದೌರ್ಬಲ್ಯ ಮತ್ತು ಆಯಾಸದಂತಹ ಸಮಸ್ಯೆಗಳು ಸಹ ಕಂಡುಬರಬಹುದು. ಕೆಲವರಲ್ಲಿ, ಇದು ಜೀರ್ಣಕಾರಿ ಸಮಸ್ಯೆ ಮತ್ತು ಚರ್ಮದ ಸಮಸ್ಯೆಗಳನ್ನು ಹೆಚ್ಚಿಸಬಹುದು. ಈ ಅಭ್ಯಾಸವು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ತಡೆಯುವುದು ಹೇಗೆ?
ಸಿಹಿತಿಂಡಿಗಳ ಆಗಾಗ ಸೇವನೆ ಮಾಡುವುದನ್ನು ತಡೆಯಲು ಅಥವಾ ಆ ಹಂಬಲವನ್ನು ತಪ್ಪಿಸಲು ಸಮತೋಲಿತ ಆಹಾರವನ್ನು ಸೇವನೆ ಮಾಡಿ. ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡಿ ತಿನ್ನಿರಿ, ಹೆಚ್ಚು ಹೊತ್ತು ಹಸಿವಿನಿಂದ ಇರಬೇಡಿ. ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ ಮತ್ತು ಒಳ್ಳೆಯ ನಿದ್ರೆ ಮಾಡಿ. ಒತ್ತಡ ಕಡಿಮೆ ಮಾಡಲು, ಯೋಗ ಅಥವಾ ಲಘು ವ್ಯಾಯಾಮವನ್ನು ಅಭ್ಯಾಸ ಮಾಡಿ. ಸಿಹಿತಿಂಡಿಗಳ ಬದಲಿಗೆ ಹಣ್ಣು, ಒಣ ಹಣ್ಣು ಅಥವಾ ಆರೋಗ್ಯಕರ ತಿಂಡಿಗಳನ್ನು ಆಯ್ಕೆ ಮಾಡಿಕೊಳ್ಳಿ. ಇದೆಲ್ಲದರ ಜೊತೆಗೆ ಸಿಹಿತಿಂಡಿಗಳ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡುವುದರಿಂದ ಈ ಅಭ್ಯಾಸವನ್ನು ನಿಯಂತ್ರಿಸಬಹುದು.
For More Updates Join our WhatsApp Group :




