ತಿಂಗಳಲ್ಲಿ 15 ಜೀವ ಬಲಿ; ಮೃತ್ಯುಕೂಪವಾಗುತ್ತಿದೆಯೇ ರಾಷ್ಟ್ರೀಯ ಹೆದ್ದಾರಿ?
ತುಮಕೂರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲು ಸಾಲು ಅಪಘಾತಗಳು ನಡೆಯುತ್ತಿದ್ದು, ತಮ್ಮದಲ್ಲದ ತಪ್ಪಿಗೆ ಅನೇಕ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. 2025ರ ಡಿಸೆಂಬರ್ 25ರಿಂದ 2026ರ ಜನವರಿ 26ರವರೆಗೆ ಒಟ್ಟು 31 ದಿನಗಳ ಅವಧಿಯಲ್ಲಿ ಬರೋಬ್ಬರಿ 15 ಮಂದಿ ರಸ್ತೆ ಅಪಘಾತದಲ್ಲಿ ಜೀವ ಬಿಟ್ಟಿದ್ದಾರೆ. ಹೀಗಾಗಿ ತುಮಕೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಮೃತ್ಯುಕೂಪವಾಗಿ ಮಾರ್ಪಟ್ಟಿದ್ಯಾ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಅಪಘಾತಗಳ ಸರಮಾಲೆ
- 2025ರ ಡಿಸೆಂಬರ್ 25ರ ಮಧ್ಯರಾತ್ರಿ ಚಿತ್ರದುರ್ಗದ ಹಿರಿಯೂರು ಬಳಿಯ ಬಸ್ ದುರಂತದಲ್ಲಿ ಒಂದು ಮಗು ಸೇರಿ ಒಟ್ಟು 7 ಮಂದಿ ಮೃತಪಟ್ಟಿದ್ದರು. ಬಸ್ಗೆ ಲಾರಿ ಗುದ್ದಿದ ಪರಿಣಾಮ ಅವಘಡ ನಡೆದಿತ್ತು.
- 2026ರ ಜನವರಿ 1ರಂದು ತುಮಕೂರು ಹೊರವಲಯದ ಕೋರಾ ಬಳಿ ಲಾರಿಗೆ ಬೈಕ್ ಗುದ್ದಿದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದ.
- ಜನವರಿ 9ರಂದು ತುಮಕೂರು ತಾಲೂಕಿನ ವಸಂತನರಾಸಪುರದ ಬಳಿ ನಡೆದ ಐಯ್ಯಪ್ಪ ಸ್ವಾಮಿ ಭಕ್ತರ ಕಾರು ಅಪಘಾತದಲ್ಲಿ ಮಗು ಸೇರಿ 4 ಮಂದಿ ಪ್ರಾಣ ಕಳೆದುಕೊಂಡಿದ್ದರು. ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿಯಾಗಿತ್ತು.
- ಜನವರಿ 26ರ ಬೆಳಿಗ್ಗೆ ತುಮಕೂರು ತಾಲೂಕಿನ ನೆಲಹಾಳ್ ಬಳಿ ನಡೆದ ಕಾರು ಅಪಘಾತದಲ್ಲಿ ಮೂವರು ಟೆಕ್ಕಿಗಳು ಮೃತಪಟ್ಟಿದ್ದು, ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಸಾವು ನೋವುಗಳು ಸಂಭವಿಸಿದ್ದವು.
ಮೇಲಿಂದ ಮೇಲೆ ನಡೆಯುತ್ತಿರುವ ಈ ರೀತಿಯ ಅಪಘಾತಗಳಿಗೆ ಲಾರಿಗಳಿಂದ ಆಗುತ್ತಿರುವ ಪರೋಕ್ಷ ಸಮಸ್ಯೆಗಳೂ ಕಾರಣ. ನಡೆದಿರುವ ಎಲ್ಲ ಅಪಘಾತಗಳಲ್ಲೂ ಲಾರಿ ಹೆಸರು ಕೇಳಿಬಂದಿದ್ದು, ವಿಶ್ರಾಂತಿ ಇಲ್ಲದೆ ಚಾಲನೆ ಮಾಡುವ ಲಾರಿಗಳ ಚಾಲಕರಿಗೆ ಹೈವೇನಲ್ಲಿ ಟ್ರಕ್ ಟರ್ಮಿನಲ್ ಇಲ್ಲದಿರುವುದೂ ಅಪಘಾತಗಳಿಗೆ ಎಡೆಮಾಡಿಕೊಡುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್, ಹಿಂದೆ ಟ್ರಕ್ ಟರ್ಮಿನಲ್ ನೀಡಲಾಗಿತ್ತು. ಆದರೆ ಹಿಂದಿನ ಸರ್ಕಾರ ಅದನ್ನು ಸೈಟ್ಗಳನ್ನು ಮಾಡಿ ಮಾರಿದೆ. ಅಗತ್ಯ ಬಿದ್ರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ವ್ಯವಸ್ಥೆ ಮಾಡೋದಾಗಿ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲು ಸಾಲು ಅಪಘಾತಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದಿದ್ದೇನೆ ಎಂದಿದ್ದಾರೆ.
For More Updates Join our WhatsApp Group :




