ಅಣ್ಣನ ಅಗಲಿಕೆಯ ಶೋಕ ತಡೆಯಲಾರದೆ ತಮ್ಮನೂ ವಿಧಿವಶ.
ಕಲಬುರಗಿ: ಅಣ್ಣ ಸತ್ತ ಮರು ದಿನವೇ ಆತನ ಸಾವಿನ ದುಃಖವನ್ನು ತಡೆಯಲಾರದೆ ತಮ್ಮನೂ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ನಡೆದಿದೆ. ಅಣ್ಣನ ಅಗಲಿಕೆಯಿಂದ ಮಾನಸಿಕವಾಗಿ ಕುಸಿದಿದ್ದ ಶಿವರಾಯ ಅವರು ಆಘಾತದಿಂದ ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ.
ಅಣ್ಣನ ಸಾವಿನ ದುಃಖದಲ್ಲೇ ತಮ್ಮ ಸಾವು
ಗ್ರಾಮದ ಹಿರಿಯ ನಿವಾಸಿ ಬಸವಂತರಾಯ ಸಣ್ಣಕ್ (81) ಜನವರಿ 26ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರವು ಜನವರಿ 27ರಂದು ನೆರವೇರಿತು. ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಅವರ ತಮ್ಮ ಶಿವರಾಯ ಸಣ್ಣಕ್ (79) ಅವರು ಅಣ್ಣನ ಅಗಲಿಕೆಯ ಆಘಾತಕ್ಕೆ ಒಳಗಾಗಿ ಮನೆಗೆ ಮರಳಿದ ಬಳಿಕ ಹಾಸಿಗೆ ಹಿಡಿದ್ದರು. ಅಣ್ಣನ ಸಾವಿನ ದುಃಖ ಶಿವರಾಯ ಸಣ್ಣಕ್ ಮನಸ್ಸಿನ ಮೇಲೆ ತೀವ್ರವಾಗಿ ಪರಿಣಾಮ ಬೀರಿದ್ದು, ಅದೇ ದಿನ ರಾತ್ರಿ ಅವರೂ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಸತತ ಎರಡು ದಿನಗಳಲ್ಲಿ ಸಹೋದರರು ಅಗಲಿರುವುದರಿಂದ ಬಡದಾಳ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.
ಹೃದಯಾಘಾತದಿಂದ 35 ವರ್ಷದ ಯುವಕ ಸಾವು
ಹೃದಯಘಾತದಿಂದ 35 ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ತುರ್ಚಗಟ್ಟ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ರಮೇಶ್ (35) ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ರಮೇಶ್ಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ವಿಷಯ ತಿಳಿದ ಕುಟುಂಬಸ್ಥರು ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಲೇ ರಮೇಶ್ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
For More Updates Join our WhatsApp Group :




