ಮದುವೆ ನಾಟಕವಾಡಿ ಲಕ್ಷಾಂತರ ರೂ. ಲೂಟಿ ಆರೋಪ.
ದೇವನಹಳ್ಳಿ: ಪ್ರೀತಿ, ಮದುವೆ ಎಂಬ ನಾಟಕವಾಡಿ ಪುರುಷರನ್ನು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ ದೋಚುತ್ತಿದ್ದ ಕಿರಾತಕ ಮಹಿಳೆಯೊಬ್ಬಳ ಅಸಲಿ ಮುಖ ಇದೀಗ ದೊಡ್ಡಬಳ್ಳಾಪುರದಲ್ಲಿ ಬಯಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ವಿರುದ್ಧ ಆರೋಪ ಕೇಳಿಬಂದಿದ್ದು, ಮೊದಲ ಹಾಗೂ ಎರಡನೇ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸುಧಾರಾಣಿ ಹಣವಿರುವವರನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಳು ಎನ್ನಲಾಗಿದೆ.
ಈಗಾಗಲೇ ಮೂವರನ್ನು ಮದುವೆಯಾಗಿರುವ ಈಕೆ, ತನ್ನ ಇಬ್ಬರು ಪತಿಯರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದಾರೆ.
ಬುಲೆಟ್ ಓಡಿಸಲು ಬರಲ್ಲ ಎಂದು ಮೊದಲ ಪತಿಗೆ ಕೈಕೊಟ್ಟಿದ್ದ ಸುಧಾರಾಣಿ!
ಸುಧಾರಾಣಿ ಮೊದಲು ವೀರೆಗೌಡ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳೂ ಜನಿಸಿದ್ದರು. ಆದರೆ, ದಾಂಪತ್ಯ ಜೀವನದ ನಡುವೆಯೇ ಪತಿಗೆ ‘ಕಾರು ಮತ್ತು ಬುಲೆಟ್ ಓಡಿಸಲು ಬರಲ್ಲ’ ಎಂಬ ಕ್ಷುಲ್ಲಕ ಕಾರಣ ನೀಡಿ, ಮಕ್ಕಳನ್ನು ಹಾಗೂ ವೀರೆಗೌಡರನ್ನು ತೊರೆದು ಹೋಗಿದ್ದಳು.
ಎರಡನೇ ಪತಿಗೆ 20 ಲಕ್ಷ ರೂ. ಪಂಗನಾಮ!
ಮೊದಲ ಪತಿಯಿಂದ ದೂರಾದ ಸುಧಾರಾಣಿ, ನಂತರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅನಂತಮೂರ್ತಿ ಎಂಬುವವರನ್ನು ಸಂಪರ್ಕಿಸಿದ್ದಳು. ಗಂಡ ತೀರಿಹೋಗಿದ್ದಾರೆ ಎಂದು ಸುಳ್ಳು ಹೇಳಿ ಆತನನ್ನು ನಂಬಿಸಿ, ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆಯಾಗಿದ್ದಳು. ಸುಮಾರು ಒಂದೂಕಾಲು ವರ್ಷಗಳ ಕಾಲ ಅನಂತಮೂರ್ತಿ ಜೊತೆ ಸಂಸಾರ ಮಾಡಿದ್ದಳು. ಈ ಅವಧಿಯಲ್ಲಿ ವಿವಿಧ ಕಾರಣಗಳನ್ನು ನೀಡಿ ಸುಮಾರು 15 ರಿಂದ 20 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದಳು ಎಂದು ಆರೋಪಿಸಲಾಗಿದೆ.
For More Updates Join our WhatsApp Group :




