ನಿರ್ಮಲಾ ಸೀತಾರಾಮನ್ ಫೆಬ್ರುವರಿ 1ರಂದು ಮಂಡಿಸಲಿರುವ ಬಜೆಟ್ ಬಗ್ಗೆ ವಿವಿಧ ಕ್ಷೇತ್ರಗಳ ಅಪೇಕ್ಷೆಗಳು.
ನವದೆಹಲಿ : ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು 2026-27ರ ಸಾಲಿನ ವರ್ಷಕ್ಕೆ ಬಜೆಟ್ ಮಂಡಿಸುತ್ತಿದ್ದಾರೆ. ಹಲವು ಕ್ಷೇತ್ರಗಳಿಂದ ಈ ಬಜೆಟ್ ಬಗ್ಗೆ ನಿರೀಕ್ಷೆಗಳು ಹಲವಿವೆ. ತೆರಿಗೆ ಪಾವತಿದಾರರು, ಉದ್ಯಮ ವಲಯ, ಹಣಕಾಸು ಮಾರುಕಟ್ಟೆ, ಬ್ಯಾಂಕ್, ಕೃಷಿ, ಎಂಎಸ್ಎಂಇ ಕ್ಷೇತ್ರದವರು ಈ ಬಜೆಟ್ನಿಂದ ಏನೇನು ಅಪೇಕ್ಷಿಸುತ್ತಿದ್ದಾರೆ.
ಹಣಕಾಸು ಮಾರುಕಟ್ಟೆ: ಜನರ ಉಳಿತಾಯ ಹಣ ಈಕ್ವಿಟಿ ಮತ್ತು ಮ್ಯೂಚುವಲ್ ಫಂಡ್ಗಳತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಲಿಕ್ವಿಡಿಟಿ ಹೆಚ್ಚಿಸುವಂತಹ ಕ್ರಮಗಳನ್ನು ಬಜೆಟ್ನಲ್ಲಿ ಕೈಗೊಳ್ಳಲಾಗಬಹುದು ಎಂದು ಹಣಕಾಸು ಮಾರುಕಟ್ಟೆ ಅಪೇಕ್ಷಿಸುತ್ತಿದೆ. ಸಾಲದ ಗುಣಮಟ್ಟ ರಾಜಿಯಾಗದ ರೀತಿಯಲ್ಲಿ ಸಾಲ ನೀಡುವಿಕೆಯನ್ನು ಹೆಚ್ಚಿಸಲು ಅಗತ್ಯವಾದ ವಿತ್ತೀಯ ಚೌಕಟ್ಟನ್ನು ಸರ್ಕಾರ ರೂಪಿಸಲಿ ಎಂದು ಬ್ಯಾಂಕಿಂಗ್ ಸೆಕ್ಟರ್ ಬಯಸುತ್ತಿದೆ.
ಕೃಷಿ: ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಅನುಭೋಗದ ಪಾಲು ಹೆಚ್ಚಿದೆ. ಅನುಭೋಗ ಹೆಚ್ಚಾಗಿ ಹರಿದುಬರುತ್ತಿರುವುದು ಗ್ರಾಮೀಣ ಭಾಗದಿಂದ. ಈ ಸೆಕ್ಟರ್ನಲ್ಲಿ ಮೂಲಸೌಕರ್ಯ ಮತ್ತು ಸಾಲದ ಹರಿವು ಹೆಚ್ಚಿಸಿದರೆ ಮತ್ತಷ್ಟು ಪುಷ್ಟಿ ಸಿಗಬಹುದು. ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು, ಪಿಎಂ ಕಿಸಾನ್ ಇತ್ಯಾದಿ ರೈತಪರ ಯೋಜನೆಗಳಿಗೆ ಅನುದಾನ ಹೆಚ್ಚಬೇಕು ಎನ್ನುವ ಕೂಗು ಇದೆ.
ಗೃಹ ಮತ್ತು ತೆರಿಗೆ ಪಾವತಿದಾರರು: ಆದಾಯ ತೆರಿಗೆ ಸ್ವರೂಪದಲ್ಲಿ ಮತ್ತಷ್ಟು ಸರಳತೆ ಅಥವಾ ಸುಧಾರಣೆ ಆಗಬೇಕೆಂದು ನಿರೀಕ್ಷಿಸುತ್ತಿದ್ದಾರೆ ತೆರಿಗೆ ಪಾವತಿದಾರರು. ಹೊಸ ಟ್ಯಾಕ್ಸ್ ರೆಜೀಮ್ನಲ್ಲಿ ಡಿಡಕ್ಷನ್ ಅವಕಾಶ ಹೆಚ್ಚಿಸುವುದು; ಗೃಹಸಾಲದ ಬಡ್ಡಿ ಹಣಕ್ಕೆ ಡಿಡಕ್ಷನ್ ಸೌಲಭ್ಯ ನೀಡುವುದು; ರಿಟೈರ್ಮೆಂಟ್ ಸೇವಿಂಗ್ಸ್ ವಿಸ್ತೃತಗೊಳಿಸುವುದು ಇತ್ಯಾದಿ ಕ್ರಮ ತೆಗೆದುಕೊಳ್ಳಲಿ ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಎಂಎಸ್ಎಂಇಗಳು: ಮಧ್ಯಮ ಮತ್ತು ಸಣ್ಣ ಉದ್ದಿಮೆಗಳು ಬಲಗೊಂಡಷ್ಟೂ ಆರ್ಥಿಕ ವಿಕಾಸ ಹೆಚ್ಚಾಗುತ್ತದೆ, ಜನರ ತಲಾದಾಯವೂ ಹೆಚ್ಚುತ್ತದೆ. ಸಣ್ಣ ಉದ್ದಿಮೆಗಳಿಗೆ ಸುಲಭ ಸಾಲ, ಉದ್ಯಮ ಸ್ನೇಹಿ ವಾತಾವರಣ ಇತ್ಯಾದಿ ಸೌಕರ್ಯಗಳನ್ನು ಹೆಚ್ಚಿಸಬೇಕು ಎನ್ನುವುದು ಈ ಕ್ಷೇತ್ರದ ಒತ್ತಾಯ.
For More Updates Join our WhatsApp Group :




