5ನೇ ಟಿ20ರಲ್ಲಿ ವಿಫಲವಾದರೆ ಆರಂಭಿಕನ ಸ್ಥಾನ ಕೈ ತಪ್ಪುವ ಸಾಧ್ಯತೆ.
ಭಾರತ ಮತ್ತು ನ್ಯೂಝಿಲೆಂಡ್ ನಡುವಣ 5ನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು (ಜ.31) ತಿರುವನಂತಪುರದ ಗ್ರೀನ್ಫೀಲ್ಡ್ ಮೈದಾನದಲ್ಲಿ ನಡೆಯಲಿರುವ ಪಂದ್ಯವು ಸಂಜು ಸ್ಯಾಮ್ಸನ್ ಪಾಲಿಗೆ ಕೊನೆಯ ಚಾನ್ಸ್. ಏಕೆಂದರೆ ಕಳೆದ ನಾಲ್ಕು ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ಸ್ಯಾಮ್ಸನ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ.
ನ್ಯೂಝಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೇವಲ 10 ರನ್ ಬಾರಿಸಿದ್ದ ಸ್ಯಾಮ್ಸನ್, ದ್ವಿತೀಯ ಪಂದ್ಯದಲ್ಲಿ 6 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು ಮೂರನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಹಾಗೆಯೇ ನಾಲ್ಕನೇ ಪಂದ್ಯದಲ್ಲಿ 24 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.
ಅಂದರೆ ಕಳೆದ ನಾಲ್ಕು ಇನಿಂಗ್ಸ್ಗಳ ಮೂಲಕ ಸ್ಯಾಮ್ಸನ್ ಕಲೆಹಾಕಿರುವುದು ಕೇವಲ 40 ರನ್ಗಳು ಮಾತ್ರ. ಹೀಗಾಗಿಯೇ ಐದನೇ ಟಿ20 ಪಂದ್ಯವು ಸಂಜು ಸ್ಯಾಮ್ಸನ್ ಪಾಲಿಗೆ ನಿರ್ಣಾಯಕ. ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರೆ ಮಾತ್ರ ಅವರು ಟಿ20 ವಿಶ್ವಕಪ್ನಲ್ಲಿ ಆರಂಭಿಕನಾಗಿ ಮುಂದುವರೆಯಬಹುದು.
ಸ್ಯಾಮ್ಸನ್ ಸ್ಥಾನಕ್ಕೆ ಕುತ್ತು:
ಸಂಜು ಸ್ಯಾಮ್ಸನ್ ಐದನೇ ಟಿ20 ಪಂದ್ಯದಲ್ಲೂ ವಿಫಲರಾದರೆ, ಟಿ20 ವಿಶ್ವಕಪ್ನಲ್ಲಿ ಆರಂಭಿಕನಾಗಿ ಇಶಾನ್ ಕಿಶನ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಏಕೆಂದರೆ ನ್ಯೂಝಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿರುವ ತಿಲಕ್ ವರ್ಮಾ ಮುಂಬರುವ ಟಿ20 ವಿಶ್ವಕಪ್ ವೇಳೆ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಅಲ್ಲದೆ ಟಿ20 ವಿಶ್ವಕಪ್ನಲ್ಲಿ ತಿಲಕ್ ವರ್ಮಾ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇತ್ತ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿರುವ ಇಶಾನ್ ಕಿಶನ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ.
For More Updates Join our WhatsApp Group :




