ಹುಬ್ಬಳ್ಳಿ: ಅಪ್ರಾಪ್ತ ಮಕ್ಕಳಿಗೆ ದ್ವಿಚಕ್ರ ವಾಹನ ಚಾಲನೆಗೆ ನೀಡಿ, ಸಂಚಾರ ನಿಯಮ ಉಲ್ಲಂಘನೆ ಮಾಡಿಸಲು ಪರೋಕ್ಷ ಸಹಕಾರ ನೀಡಿದ ಮೂವರು ಪಾಲಕರಿಗೆ ಇಲ್ಲಿನ 1ನೇ ಜೆಎಂಎಫ್ಸಿ ನ್ಯಾಯಾಲಯ 75 ಸಾವಿರ ರೂ. ದಂಡ ವಿಧಿಸಿದೆ.
ಹುಬ್ಬಳ್ಳಿಯ ಗೌಳಿಗಲ್ಲಿಯ ಅನಿಲ ಕೋಳೇಕರ, ಕಮರಿಪೇಟೆಯ ಸುನೀಲ ಮೇತ್ರಾಣಿ ಹಾಗೂ ಪಡದಯ್ಯನ ಹಕ್ಕಲದ ಅಶ್ವಿನಿ ಕಲಾ ಅವರಿಂದ ತಲಾ 25 ಸಾವಿರ ರೂ. ದಂಡ ಕಟ್ಟಿಸಿಕೊಳ್ಳಲಾಗಿದೆ.
ಕೆಲ ದಿನಗಳ ಹಿಂದೆ ದಕ್ಷಿಣ ಸಂಚಾರ ಠಾಣೆ ಪೊಲೀಸರು ಕರ್ತವ್ಯದಲ್ಲಿದ್ದಾಗ, ದ್ವಿಚಕ್ರ ವಾಹನ ಚಲಾಯಿಸುತ್ತಿದ್ದವರ ಪರಿಶೀಲನೆ ನಡೆಸಿದ್ದರು. ಆ ವೇಳೆ ಮೂವರು ಅಪ್ರಾಪ್ತರು ವಾಹನ ಚಲಾಯಿಸುತ್ತಿರುವುದು ಕಂಡು ಬಂದಿತ್ತು. ವಾಹನಗಳ ನಂಬರ್ ಆಧರಿಸಿ ನೋಟಿಸ್ ನೀಡಲಾಗಿತ್ತು. ಇದೀಗ ಪಾಲಕರು ಕೋರ್ಟ್ನಲ್ಲಿ ದಂಡ ಪಾವತಿಸಿದ್ದಾರೆ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.