ಮುಂಬೈ: ಹಿಂದೂಗಳ ಪವಿತ್ರ ಗ್ರಂಥ ರಾಮಾಯಣವನ್ನು ಅವಹೇಳನ ಮಾಡುವ ರೀತಿಯಲ್ಲಿ ಸ್ಕಿಟ್ ಮಾಡಿದ್ದ ವಿದ್ಯಾರ್ಥಿಗಳಿಗೆ ಐಐಟಿ ಬಾಂಬೇ 1.2ಲಕ್ಷ ರೂ ದಂಡ ಹೇರಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ ಮಾರ್ಚ್ 31 ರಂದು ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್ (ಪಿಎಎಫ್) ಆಯೋಜಿಸಿತ್ತು. ಈ ಸಂದರ್ಭದಲ್ಲಿ ರಾಮಾಯಣದ ವಿಡಂಬನೆ ಎಂದು ಹೇಳಲಾದ ‘ರಾಹೋವನ’ ಶೀರ್ಷಿಕೆಯ ವಿವಾದಾತ್ಮಕ ನಾಟಕವನ್ನು ಪ್ರದರ್ಶಿಸಿದ ಎಂಟು ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ದಂಡ ವಿಧಿಸಿದೆ.
ಈ ನಾಟಕದಲ್ಲಿ ಹಿಂದೂಗಳು ಪೂಜ್ಯನೀಯ ಎಂದು ಭಾವಿಸುವ ಹಿಂದೂ ಮಹಾಕಾವ್ಯ ರಾಮಾಯಣವನ್ನು ಮತ್ತು ಅದರಲ್ಲಿನ ಪಾತ್ರಗಳನ್ನು ಸಡಿಲವಾಗಿ ಚಿತ್ರಿಸಲಾಗಿದ್ದು, ಹಿಂದೂ ನಂಬಿಕೆಗಳು ಮತ್ತು ದೇವತೆಗಳ ಬಗ್ಗೆ ಅವಹೇಳನಕಾರಿ ಉಲ್ಲೇಖಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಒಂದು ವಿಭಾಗವು ನಾಟಕದ ವಿರುದ್ಧ ಔಪಚಾರಿಕವಾಗಿ ದೂರು ನೀಡಿತ್ತು.
“ಸ್ತ್ರೀವಾದವನ್ನು ಉತ್ತೇಜಿಸುವ” ಸೋಗಿನಲ್ಲಿ ನಾಟಕವು ರಾಮ, ಲಕ್ಷ್ಮಣ ಸೇರಿದಂತೆ ಪ್ರಮುಖ ಪಾತ್ರಗಳನ್ನು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಪಹಾಸ್ಯ ಮಾಡಿದೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿದ್ದರು. ಇದೇ ದೂರಿನ ಆಧಾರದ ಮೇಲೆ ಮೇ 8 ರಂದು ಐಐಟಿ ಬಾಂಬೆ ಶಿಸ್ತು ಸಮಿತಿ ಸಭೆ ಕರೆದಿತ್ತು. ಇದರ ಪರಿಣಾಮವಾಗಿ ಜೂನ್ 4 ರಂದು ಸ್ಕಿಟ್ ಮಾಡಿದ್ದ ತಂಡಕ್ಕೆ 1.2ಲಕ್ಷ ರೂ ದಂಡ ಹೇರಿದೆ.
ಸಂಸ್ಥೆಯು ನಾಲ್ಕು ವಿದ್ಯಾರ್ಥಿಗಳಿಗೆ ತಲಾ 1.2 ಲಕ್ಷ ದಂಡವನ್ನು ವಿಧಿಸಿದ್ದು, ಮೊತ್ತವು ಸೆಮಿಸ್ಟರ್‌ನ ಬೋಧನಾ ಶುಲ್ಕದಂತೆಯೇ ಇರುತ್ತದೆ. ಉಳಿದ ನಾಲ್ವರು ವಿದ್ಯಾರ್ಥಿಗಳಿಗೆ ತಲಾ 40,000 ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ