ಅವಳಿ ಕರುಗಳಿಗೆ ಅದ್ಧೂರಿ ತೊಟ್ಟಿಲು ಶಾಸ್ತ್ರ

ಅವಳಿ ಕರುಗಳಿಗೆ ಅದ್ಧೂರಿ ತೊಟ್ಟಿಲು ಶಾಸ್ತ್ರ

ಗದಗ ಜಿಲ್ಲೆಯ ರಾಮಗಿರಿ ಗ್ರಾಮದಲ್ಲಿ ಅಪರೂಪದ ಸಂಭ್ರಮ

ಮನೆಯಲ್ಲಿ ಹುಟ್ಟಿದ ಮಕ್ಕಳಿಗೆ ತೊಟ್ಟಿಲು ಕಾರ್ಯ ಮಾಡೋದು ಮಾಮೂಲು. ಆದ್ರೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿ ಗ್ರಾಮದಲ್ಲಿ ಅವಳಿ ಜವಳಿ ಆಕಳು ಕರುಗಳಿಗೆ ಅದ್ಧೂರಿಯಾಗಿ ಮನೆಯವರು ತೊಟ್ಟಿಲು ಶಾಸ್ತ್ರ ಮಾಡಿದ್ದಾರೆ. ಇದಕ್ಕೆ ನೂರಾರು ಗ್ರಾಮಸ್ಥರು ಕೂಡ ಸಾಕ್ಷಿಯಾಗಿದ್ದಾರೆ.

ಗ್ರಾಮದ ರೈತ ನಾಗರಾಜ್ ಮಡಿವಾಳರ ಮನೆಯಲ್ಲಿ ತೊಟ್ಟಿಲಿಗೆ ತೆಂಗಿನ ಗರಿ, ತಳಿರು ತೋರಣ, ಹೂವುಗಳಿಂದ ಶೃಂಗಾರ ಮಾಡಲಾಗಿದ್ದು, ಅಕ್ಷರಶಃ ಹಬ್ಬದ ವಾತಾವರಣ ಸ್ಥಳದಲ್ಲಿ ಮನೆ ಮಾಡಿತ್ತು. ಸಂಪ್ರದಾಯದಂತೆ ಮುದ್ದಾದ ಕರುಗಳನ್ನು ತೊಟ್ಟಿಲಿಗೆ ಹಾಕಿ ನೆರೆದಿದ್ದವರು ಸಂತಸಪಟ್ಟರು. ಮಠಾಧೀಶರು ಕೂಡ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಹೂವಿನಶಿಗ್ಲಿ ವಿರಕ್ತ ಮಠದ ಚನ್ನವೀರಮಹಾಸ್ವಾಮಿಗಳು, ಗಂಜಿಗಟ್ಟಿ ಚರಮೂರ್ತೇಶ್ವರ ಮಠದ ಡಾ. ವೈಜನಾಥ ಶಿವಲಿಂಗ ಮಹಾಸ್ವಾಮೀಜಿ ಕರುಗಳ ಕಿವಿಯಲ್ಲಿ ಹೆಸರು ಹೇಳುವ ಮೂಲಕ ನಾಮಕರಣ ನೆರವೇರಿಸಿಕೊಟ್ಟರು. ಮುದ್ದಾದ ಕರುಗಳಿಗೆ ಶಿವ-ಬಸವ ಅಂತ ನಾಮಕರಣ ಮಾಡಲಾಯ್ತು.

ಈ ಕರುಗಳಿಗೆ ಜನ್ಮ ನೀಡಿರುವ ಹಸುವಿಗೆ 15 ದಿನಗಳ ಹಿಂದೆ ಸೀಮಂತ ಕಾರ್ಯವನ್ನೂ ರೈತ ನಾಗರಾಜ್ ಮಡಿವಾಳ ನೆರವೇರಿಸಿದ್ದರು. ಹೀಗಾಗಿ ಅವುಗಳನ್ನ ತೊಟ್ಟಿಲಿಗೆ ಹಾಕುವ ಕಾರ್ಯವನ್ನೂ ಕುಟುಂಬಸ್ಥರು ಭರ್ಜರಿಯಾಗಿಯೇ ನಡೆಸಿ ಗಮನ ಸೆಳೆದಿದ್ದಾರೆ. ನೂರಾರು ಜನರನ್ನು ಆಹ್ವಾನಿಸಿ ಖುಷಿಪಟ್ಟಿದ್ದಾರೆ.

ನೆರೆದಿದ್ದ ಮಹಿಳೆಯರು ಕರುಗಳಿಗೆ ಆರತಿ ಎತ್ತಿ ಸಂಭ್ರಮಿಸಿದ್ದು, ರೈತನ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಮಕ್ಕಳಿಗೇ ತೊಟ್ಟಿಲು ಶಾಸ್ತ್ರವನ್ನು ಸರಿಯಾಗಿ ಮಾಡದ ಈ ಕಾಲದಲ್ಲಿ, ಮನೆಯ ಕೊಟ್ಟಿಗೆಯಲ್ಲಿ ಕರುಗಳು ಹುಟ್ಟಿರೋದನ್ನು ಈ ಪರಿ ಸಂಭ್ರಮಿಸಿರೋದು ನಿಜಕ್ಕೂ ಮಾದರಿ ಎಂಬ ಮಾತುಗಳು ಕೇಳಿಬಂದಿವೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *