ಸುಳ್ಯ : ದಕ್ಷಿಣ ಕನ್ನಡ-ಕಾಸರಗೋಡು ಗಡಿನಾಡ ಪ್ರದೇಶವಾದ ಜಾಲ್ಸೂರು ಸಮೀಪದ ಪಂಜಿಕಲ್ಲು ಎಂಬ ಗ್ರಾಮದ ಶಾಲಾ ಜಗಲಿಯೊಂದರಲ್ಲಿ ನವಜಾತ ಶಿಶುವೊಂದು ಭಾನುವಾರ ಮುಂಜಾನೆ ಪತ್ತೆಯಾಗಿದೆ.
ಶಾಲೆಯ ಸಮೀಪದಲ್ಲಿ ಹಲವು ಮನೆಗಳಿದ್ದು ದಾರಿಯಲ್ಲಿ ಹೋಗುವ ವ್ಯಕ್ತಿಯೊಬ್ಬರಿಗೆ ಮಗು ಅಳುವ ಧ್ವನಿಯು ಕೇಳಿಸಿತ್ತು. ನಂತರದಲ್ಲಿ ಈ ಬಗ್ಗೆ ಮಾಹಿತಿಯರಿತು ಸ್ಥಳಕ್ಕೆ ಗ್ರಾಮಸ್ಥರು ಧಾವಿಸಿದಾಗ ಮಗು ಇರುವುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ. ಎರಡು ತುಂಡು ಬಟ್ಟೆ ಹಾಗೂ ಮಗುವನ್ನು ಜಗಲಿಯಲ್ಲಿ ಮಲಗಿಸಿ ಆರೋಪಿಗಳು ಪರಾರಿಯಾಗಿದ್ದಾರೆ.
ಮಗು ಹೆಣ್ಣು ಎಂದು ಗುರುತಿಸಲಾಗಿದ್ದು ತಕ್ಷಣವೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅದೂರು ಪೊಲೀಸರು ಪರಿಶೀಲನೆ ನಡೆಸಿ ಮಗುವಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಮಗುವನ್ನು ಕೊಂಡೊಯ್ದು ಕಾಸರಗೋಡಿನ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.