ಬಾಲಕ ಗಂಭೀರ ಗಾಯ, ನಾಯಿ ಮಾಲೀಕರಿಗೆ ಎಫ್‌ಐಆರ್.
ಬೆಂಗಳೂರು: ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೀದಿ ನಾಯಿಗಳ ಜೊತೆಗೆ ಸಾಕು ನಾಯಿಗಳ ದಾಳಿಯೂ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ರಾಜಾಜಿನಗರದ 1ನೇ ಬ್ಲಾಕ್‌ನಲ್ಲಿ 11 ವರ್ಷದ ಬಾಲಕನ ಮೇಲೆ ಸಾಕು ನಾಯಿ ದಾಳಿ ನಡೆಸಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬಾಲಕ ಒದ್ದಾಡುತ್ತಿದ್ದರೂ ಕ್ಯಾರೇ ಎನ್ನದ ಮಾಲೀಕರು
ಮಾರ್ಚ್ 21ರಂದು ಬೆಳಗ್ಗೆ ಬ್ರೆಡ್ ತರಲು ಸೈಕಲ್‌ನಲ್ಲಿ ತೆರಳುತ್ತಿದ್ದ ಬಾಲಕನ ಮೇಲೆ ವಾಕ್‌ಗೆ ಕರೆತಂದ ನಾಯಿಯು ಏಕಾಏಕಿ ದಾಳಿ ಮಾಡಿ ತೊಡೆಗೆ ಕಚ್ಚಿ ಗಾಯಗೊಳಿಸಿದೆ. ಘಟನೆಯಿಂದ ಬೆಚ್ಚಿಬಿದ್ದ ಬಾಲಕ ನೋವಿನಿಂದ ಬಳಲುತ್ತಿದ್ದರೂ, ನಾಯಿ ಮಾಲೀಕರು ಯಾವುದೇ ರೀತಿಯ ಸಹಾಯ ಮಾಡದೇ ಉದಾಸೀನತೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಚಿಕಿತ್ಸೆ ವೆಚ್ಚವನ್ನು ಕುಟುಂಬಸ್ಥರೇ ಭರಿಸಿದ್ದು, ಇದರಿಂದ ಆಕ್ರೋಶಗೊಂಡ ಪೋಷಕರು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ನಾಯಿ ಮಾಲೀಕನಿಗೆ ನೋಟಿಸ್
ಘಟನೆಯಾಗಿ 15 ದಿನಗಳು ಕಳೆದರೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ನಾಯಿ ಮಾಲೀಕನಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲು ಮುಂದಾಗಿದ್ದಾರೆ. ಬಾಲಕನ ತಾತ ವೇಣು ಮಾಧವ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಹೆಚ್ಚುತ್ತಿರುವ ಇಂತಹ ಘಟನೆಗಳು ಜನರಲ್ಲಿ ಭೀತಿ ಹುಟ್ಟಿಸುತ್ತಿವೆ. ಸಾಕು ಪ್ರಾಣಿಗಳನ್ನು ಹೊರಗೆ ಕರೆದುಕೊಂಡು ಹೋಗುವಾಗ ಮಾಲೀಕರು ಕಡ್ಡಾಯವಾಗಿ ಮುನ್ನೆಚ್ಚರಿಕೆ ವಹಿಸಬೇಕು, ಇಲ್ಲವಾದರೆ ಇಂತಹ ಅಪಾಯಗಳು ಮರುಕಳಿಸುವ ಸಾಧ್ಯತೆ ಇದೆ.
For More Updates Join our WhatsApp Group :




