ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿರುವ ಗುಮಟಾಪುರ ಗ್ರಾಮದಲ್ಲಿ ಪ್ರತಿ ವರ್ಷ ತಪ್ಪದೆ ಗೊರೆ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಸಗಣಿ ರಾಶಿ ಹಾಕಿ ಅದರಲ್ಲಿ ಹೊರಳಾಡುವ ಗ್ರಾಮಸ್ಥರು ಸಗಣಿಯಲ್ಲೇ ಹೊಡೆದಾಡುವುದು ಈ ಹಬ್ಬದ ವಿಶೇಷ. ಬಲಿಪಾಡ್ಯಮಿಯ ಮಾರನೇ ದಿನ ಆಚರಿಸಲಾಗುವ ಈ ಹಬ್ಬದಲ್ಲಿ ಈ ಬಾರಿ ಇಬ್ಬರು ವಿದೇಶಿ ಪ್ರಜೆಗಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಅಚ್ಚಕನ್ನಡಿಗರೇ ಇರುವ ತಮಿಳುನಾಡಿಗೆ ಸೇರಿರುವ ಗುಮಟಾಪುರ ಗ್ರಾಮದಲ್ಲಿ ಗೊರೆಹಬ್ಬ ವಿಶೇಷ. ಪ್ರತಿವರ್ಷ ದೀಪಾವಳಿ ಬಲಿಪಾಡ್ಯಮಿ ಮಾರನೆ ದಿನ ಸಗಣಿಯಿಂದ ಪರಸ್ಪರರು ಹೊಡೆದಾಡಿಕೊಳ್ಳುವ ಸಂಪ್ರದಾಯ ಇಲ್ಲಿ ಮುಂದುವರಿದುಕೊಂಡು ಬಂದಿದೆ.
ಬೀರೇಶ್ವರ ದೇವಾಲಯ ಬಳಿ ಲೋಡ್‌ಗಟ್ಟಲೇ ಸಗಣಿ ತಂದು ಸುರಿದು, ಗ್ರಾಮದ ಜನರೆಲ್ಲ ಯಾವುದೇ ಜಾತಿಬೇಧಬಾವವಿಲ್ಲದೆ ಸಗಣಿಯನ್ನು ಮುದ್ದೆ ಮಾಡಿ ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ. ಅರಚುತ್ತಾ, ಕಿರುಚುತ್ತಾ ಸಂಭ್ರಮದಲ್ಲಿ ಸಗಣಿಯಲ್ಲಿ ಮಿಂದೇಳುತ್ತಾರೆ.
ಸಗಣಿಯಿಂದ ಹೊಡೆದಾಟಕ್ಕೂ ಮುನ್ನ ಇಬ್ಬರು ವ್ಯಕ್ತಿಗಳನ್ನು ಹೊಳೆದಂಡೆಯಿಂದ ಹುಲ್ಲಿನ ಮೀಸೆ, ಗಡ್ಡ ಮಾಡಿ ಕತ್ತೆಮೇಲೆ ಕೂರಿಸಿ ಕರೆತರಲಾಗುತ್ತದೆ. ಇವರನ್ನು ಕೊಂಡಕಾರರು ಎನ್ನಲಾಗುತ್ತದೆ. ಅಂದರೆ ಚಾಡಿಹೇಳುವವರು ಎಂದರ್ಥ. ಹಿಂದೆ ಚಾಡಿ ಹೇಳಿ ಗ್ರಾಮದ ಜನರಲ್ಲಿ ದ್ವೇಷ ಹುಟ್ಟಿಸಿದ್ದವರಿಗೆ ಯಾವ ರೀತಿ ಶಿಕ್ಷೆ ನೀಡಲಾಗುತ್ತಿತ್ತು ಎನ್ನುವುದರ ಸಂಕೇತ ಇದಾಗಿದೆ.
ಹಿಂದೆ ಊರ ಗೌಡರ ಮನೆಯಲ್ಲಿ ಜೀತಕ್ಕಿದ್ದ ವ್ಯಕ್ತಿ ಮಹಾಶಿವಭಕ್ತನಾಗಿದ್ದ. ಆತನ ಮರಣ ನಂತರ ಆತನ ವಿಭೂತಿ, ರುದ್ರಾಕ್ಷಿ ಹಾಗೂ ಜೋಳಿಗೆಯನ್ನು ತಿಪ್ಪೆಗೆ ಎಸೆಯಲಾಗಿತ್ತು. ಕಾಲಾನಂತರ ತಿಪ್ಪೆ ಅಗೆಯುವಾಗ ಆ ಸ್ಥಳದಲ್ಲಿ ಲಿಂಗವೊಂದು ಉದ್ಭವವಾಗಿರುವುದು ಗೋಚರಿಸಿ, ನಂತರ ಅದೇ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿ ಅಂದಿನಿಂದ ಪ್ರತಿ ವರ್ಷ ಸಗಣಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಸಗಣಿಯಿಂದ ಹೊಡೆದಾಡಿದರೆ ಚರ್ಮದ ಕಾಯಿಲೆಗಳು ವಾಸಿಯಾಗುತ್ತದೆ. ಅಷ್ಟೇ ಅಲ್ಲದೆ ಬೀರೇಶ್ವರ ದೇವರಿಗೆ ಕಟ್ಟಿಕೊಂಡ ಹರಕೆ ಈಡೇರುತ್ತದೆ ಎನ್ನುವ ನಂಬಿಕೆಯೂ ಇದೆ. ಹೀಗಾಗಿ ಮಕ್ಕಳು, ವಯಸ್ಕರು, ವೃದ್ಧರನ್ನೆನ್ನದೆ ಸಗಣಿಯನ್ನು ಉಂಡೆಮಾಡಿ ಪರಸ್ಪರ ಹೊಡೆದಾಡಿಕೊಳ್ಳುವ ಆಚರಣೆ ಇಂದಿಗೂ ಇಲ್ಲಿ ಜೀವಂತವಾಗಿದೆ.
For More Updates Join our WhatsApp Group :
