ಬೆಂಗಳೂರು : ವಿಜ್ಞಾನ ವಿಸ್ಮಯವೊಂದು ಕರ್ನಾಟಕದ ಕೋಲಾರದಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಮಹಿಳೆಯೊಬ್ಬರು ವಿಶ್ವದಲ್ಲೇ ಈವರೆಗೆ ಯಾರಲ್ಲೂ ಪತ್ತೆಯಾಗದ ರಕ್ತದ ಗುಂಪು ಹೊಂದಿರುವುದು ಬೆಳಕಿಗೆ ಬಂದಿದೆ. ಹೃದಯ ಶಸ್ತ್ರಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ 38 ವರ್ಷದ ಮಹಿಳೆಯೊಬ್ಬರು ಕೆಲವು ದಿನಗಳ ಹಿಂದೆ ದಾಖಲಾಗಿದ್ದರು. ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ ನಂತರ ವೈದ್ಯರು ಅಚ್ಚರಿಗೆ ಒಳಗಾಗಿದ್ದಾರೆ. ಮಹಿಳೆಯ ರಕ್ತದ ಗುಂಪು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವ O Rh+ ಆಗಿತ್ತು. ಆದರೆ ವಿಶೇಷವೆಂದರೆ, ಲಭ್ಯವಿರುವ ಯಾವುದೇ O+ ರಕ್ತ ಅವರ ರಕ್ತಕ್ಕೆ ಹೊಂದಾಣಿಕೆಯಾಗುತ್ತಿರಲಿಲ್ಲ. ಹೀಗಾಗಿ ಹೆಚ್ಚಿನ ಪರೀಕ್ಷೆಗಾಗಿ ಅವರ ರಕ್ತದ ಮಾದರಿಯನ್ನು ರೋಟರಿ ಬೆಂಗಳೂರು ಟಿಟಿಕೆ ಬ್ಲಡ್ ಸೆಂಟರ್ನಲ್ಲಿರುವ ಅಡ್ವಾನ್ಸ್ಡ್ ಇಮ್ಯುನೊಹೆಮಟಾಲಜಿ ರೆಫರೆನ್ಸ್ ಲ್ಯಾಬೋರೇಟರಿಗೆ ಕಳುಹಿಸಿಕೊಡಲಾಗಿತ್ತು.
ಲ್ಯಾಬೊರೇಟರಿಯ ತಜ್ಞ ವೈದ್ಯರು ಹೇಳಿದ್ದೇನು?
ಅತ್ಯಾಧುನಿಕ ಸೆರೋಲಾಜಿಕಲ್ ತಂತ್ರಗಳನ್ನು ಬಳಸಿಕೊಂಡು, ನಮ್ಮ ತಂಡವು ಅವರ ರಕ್ತವನ್ನು ಪರೀಕ್ಷೆಗೆ ಒಳಪಡಿಸಿದೆ. ಮಹಿಳೆಯ ರಕ್ತವು ಪ್ಯಾನ್ರಿಯಾಕ್ಟಿವ್ (ಅಂದರೆ, ಸೀರಮ್ ಅಥವಾ ಪ್ಲಾಸ್ಮಾ, ಪ್ರಯೋಗಾಲಯದಲ್ಲಿ ಪರೀಕ್ಷಿಸಲಾದ ಎಲ್ಲಾ ಕೆಂಪು ರಕ್ತ ಕಣಗಳೊಂದಿಗೆ ಪ್ರತಿಕ್ರಿಯಿಸುವ ಪರಿಸ್ಥಿತಿ) ಆಗಿರುವುದು ಕಂಡುಬಂದಿದೆ. ಆ ರಕ್ತವು ಎಲ್ಲಾ ಪರೀಕ್ಷಾ ಮಾದರಿಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂಬುದು ಪತ್ತೆಯಾಯಿತು. ಇದು ಅಪರೂಪದ ಅಥವಾ ತಿಳಿದಿಲ್ಲದ ರಕ್ತದ ಪ್ರಕಾರದ ಸಂಭವನೀಯ ಪ್ರಕರಣವೆಂದು ಗುರುತಿಸಲಾಗಿದೆ ಎಂದು ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ವೈದ್ಯ ಡಾ. ಅಂಕಿತ್ ಮಾಥುರ್ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಕುಟುಂಬದವರ ರಕ್ತದೊಂದಿಗೂ ಇಲ್ಲ ಹೋಲಿಕೆ!
ಮಹಿಳೆಯ ಕುಟುಂಬದವರಲ್ಲಿ ಯಾರಲ್ಲಾದರೂ ಅಂಥದ್ದೇ ಮಾದರಿಯ ರಕ್ತ ಇದೆಯೇ ಎಂದು ತಿಳಿಯಲು ಪ್ರಯತ್ನಿಸಲಾಯಿತು. ಅವರ ಕುಟುಂಬದ 20 ಸದಸ್ಯರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಯಿತು. ಆದರೆ ಅವುಗಳಲ್ಲಿ ಯಾವುದೂ ಮಹಿಳೆಯ ರಕ್ತದೊಂದಿಗೆ ಹೊಂದಿಕೆಯಾಗಲಿಲ್ಲ ಎಂದೂ ಅಂಕಿತ್ ಮಾಥುರ್ ತಿಳಿಸಿದ್ದಾರೆ.