ಹೆಣ್ಣು ಈ ನಾಡಿನ ಕಣ್ಣು, ಹೆಣ್ಣಿನ ಜನ್ಮ ಶ್ರೇಷ್ಠ, ಭೂತಾಯಿಯನ್ನ ಹೆಣ್ಣಿಗೆ ಹೋಲಿಸುತ್ತಾರೆ, ಮಾತು ಪ್ರಾರಂಭ ಮಾಡಿದರೆ ಸಾಕು ಹೆಣ್ಣನ್ನು ಹೊಗಳಿಕೆಯ ಸುರಿಮಳೆಯನ್ನೇ ಸುರಿಸುವ ನಾವು ನಿಜವಾಗಿಯೂ ಹೆಣ್ಣಿಗೆ ಗೌರವ ನೀಡುತ್ತಿದ್ದೇವೆಯೇ..?
ಅತ್ಯಾಚಾರ ಪ್ರಕರಣ, ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಅಂತಹ ಸುದ್ದಿಗಳು ಪ್ರತಿನಿತ್ಯದ ಮಾತುಗಳಾಗಿ ಹೋಗಿವೆ, ಇದನ್ನ ತಡೆಯಿಹಿಡಿಯಲು ಸಾಧ್ಯವಿಲ್ಲವೇ, ಹೆಣ್ಣಿಗೆ ನ್ಯಾಯ ಕೊಡುವವರಿಲ್ಲವೇ..? ಹೆಣ್ಣಿನ ಮೇಲಿನ ಶೋಷಣೆ ನಿಲ್ಲುವುದು ಯಾವಾಗ ಎಂದು ಬೀದಿ ಬೀದಿಗಳಲ್ಲಿ, ಮನೆ ಮನೆಗಳಲ್ಲಿ ಮಾತುಗಳಾಡುತ್ತಿದ್ದೇವೆಯೇ ಹೊರೆತು ಬೇರೆನು ಮಾಡಿದ್ದೇವೆ..?
ಇಷ್ಟಕ್ಕೂ ಹೆಣ್ಣಿಗೆ ಕೊಡುವ ಗೌರವವೆಂದರೇ ಏನು..?
ಇದು 21ನೇ ಶತಮಾನ, ಪ್ರತಿ ಕ್ಷೇತ್ರದಲ್ಲೂ ಪ್ರತಿ ವಿಷಯದಲ್ಲೂ ಹೆಣ್ಣು ತನ್ನ ಚಾಪನ್ನ ತೋರಿಸಿದ್ದಾಳೆ, ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಹೆಣ್ಣು ಇಂದು ಮನೆಯಿಂದ ಹೊರಬಂದು ಇಡೀ ದೇಶವನ್ನೇ ಮುನ್ನಡೆಸುವ ಹುದ್ದೆ, ಇಡೀ ದೇಶವನ್ನೇ ರಕ್ಷಿಸುವ ಸೇನೆ ಎಲ್ಲದರಲ್ಲೂ ಮುನ್ನುಗುತ್ತಿದ್ದಾಳೆ. ಇದನ್ನೆಲ್ಲಾ ನೋಡಿದಾಗ ನಾವು ಪುರುಷ ಪ್ರಧಾನ ಸಂಸ್ಕೃತಿಯಿಂದ ಹೊರಬಂದು ಹೆಣ್ಣಿಗೆ ಎಲ್ಲಾ ಸ್ಥಾನಮಾನ ನೀಡಿ ಅವಳಿಗೆ ಆಸರೆಯಾಗಿ, ರಕ್ಷೆಯಾಗಿದ್ದೇವಾ ಹೀಗೊಂದು ಪ್ರಶ್ನೆ ಮೂಡುತ್ತದೆ..?
ಪುರುಷ ಪ್ರಧಾನ ಸಂಸ್ಕೃತಿಯಿಂಧ ಹೊರಬಂದಿದ್ದೇವೆಯೇ..?
ಹೊರಗೆ ಹೆಣ್ಣಿನ ಸ್ವಾತಂತ್ರ್ಯ, ಹೆಣ್ಣಿಗೆ ಗೌರವ ಕೊಡಬೇಕು ಎಂದೆಲ್ಲಾ ಭಾಷಣ ಬಿಗಿಯುವ ನಾವು, ನಮ್ಮ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡುತ್ತೇವೆ ಎಂಬ ಪ್ರಶ್ನೆ ನಮ್ಮಲ್ಲಿ ನಾವು ಮಾಡಕೊಳ್ಳಬೇಕಾಗುತ್ತದೆ.
ಇಂದು ತನ್ನ ಪತ್ನಿ, ತನ್ನ ತಾಯಿ, ತನ್ನ ಸಹೋದರಿ ಅಥವಾ ತನ್ನ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಅರ್ಥಮಾಡಿಕೊಂಡಿರುವವರು ಎಷ್ಟು ಜನ ಇದ್ದಾರೆ ಎಂಬ ಪ್ರಶ್ನೆ ಇಲ್ಲಿ ಮೂಡತ್ತದೆ. ಹೆಣ್ಣು ಕೆಲಸಕ್ಕೆ ಹೋಗಲಿ, ಹೋಗದೇ ಇರಲಿ, ಅಡುಗೆ ಹೆಣ್ಣೇ ಮಾಡಬೇಕು, ಪಾತ್ರೆ ಹೆಣ್ಣೇ ತೊಳೆಯಬೇಕು, ಮನೆಯನ್ನು ಸ್ವಚ್ಛವಾಗಿಡುವ ಕೆಲಸ ಅವಳೇ ಮಾಡಬೇಕು ಎನ್ನುವ ಸಂಸ್ಕೃತಿ ಇನ್ನೋ ಎಷ್ಟು ಜನರ ಮನೆಯಲ್ಲಿದೆ.
ಗಂಡು ಹೆಣ್ಣು ಸಮಾನ, ಹೆಣ್ಣು ಯಾರಿಗೂ ಕಡಿಮೆ ಇಲ್ಲ, ಗಂಡು ಹೆಣ್ಣು ಸಮಾನ ಎಂದು ಹೇಳುವ ನಾವು ನಮ್ಮ ಮನೆಯ ಕೆಲಸದಲ್ಲಿ ಸಮಾನತೆ ಅನ್ವಹಿಸುತ್ತಿದ್ದೇವೆಯೇ ಎಂದು ಒಮ್ಮೆ ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಒಬ್ಬ ಹೆಣ್ಣು ಮಗು ತನ್ನ ಮುಟ್ಟಿನ ಅಥವಾ ಋತುವಿನ ದಿನಗಳಲ್ಲಿ ಎಷ್ಟು ನೋವು ಅನುಭವಿಸುತ್ತಾಳೆ, ಆ ಸಮಯದಲ್ಲಿ ನಾನು ಅವಳಿಗೆ ಯಾವ ರೀತಿ ಧೈರ್ಯವಾಗಿ, ಆಸರೆಯಾಗಿ ನಿಲ್ಲುತ್ತಿದ್ದೇವೆ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿದೆಯಾ..?
ಹೊರಗೆ ಕೆಲಸಕ್ಕೂ ಹೋಗಿ ಮನೆಗೆ ಬಂದು ಎಲ್ಲಾ ಕೆಲಸ ಮಾಡುವ ಹೆಣ್ಣು ,ತನಗೆ ತಾನು ಯಾವಾಗ ಸಮಯ ನೀಡುತ್ತಾಳೆ..?
ತನ್ನ ತಾಯಿಯನ್ನೇ ಛೀ ಎಂದವನು, ವೃದ್ಧಾಶ್ರಮಕ್ಕೆ ಸೇರಿಸಿದವನು ಸಮಾಜದಲ್ಲಿ ಬೇರೆಯ ಹೆಣ್ಣನ್ನು ಗೌರವದಿಂದ ಕಾಣುತ್ತಾನೆ ಎಂದರೆ ಅದನ್ನು ನಂಬಲು ಸಾಧ್ಯವೇ..? ತನ್ನ ಸಹೋದರಿಯನ್ನ ಪ್ರೀತಿಯಿಂದ ಕಾಣದ, ಪ್ರೀತಿಯನ್ನ ತೋರಿಸದೇ ಅವಳ ಬೇಕು ಬೇಡವ ಕೇಳದವ, ಸಮಾಜದಲ್ಲಿ ಹೆಣ್ಣಿಗೆ ಎಷ್ಟು ಗೌರವ ಕೊಡುತ್ತಾನೆ..? ಪತ್ನಿಗಾಗಿ ಹೆತ್ತ ತಾಯಿಯನ್ನೆ ಕೊಲೈಗೈದ ಮಗ, ಆಸ್ತಿಗಾಗಿ ಅಕ್ಕನನ್ನೇ ಕೊಲೆ ಮಾಡಿಸಿದ ತಮ್ಮ,, ಪ್ರೇಯಸಿ ಮಾತು ಕೇಳಿ ಪತ್ನಿಗೆ ವಿಷವಿಟ್ಟ ಪತಿ, 60 ವರ್ಷದ ವೃದ್ಧೆಯ ಮೇಲೆ ಲೈಂಗಿಕ ದೌರ್ಜನ್ಯ, 6 ವಯಸ್ಸಿನ ಮಗುವಿನ ಮೇಲೆ ಅತ್ಯಾಚಾರ, ಇದೆಲ್ಲಾ ಸಾಮಾನ್ಯವಾಗ ಕೇಳಿಬರುವ ಸುದ್ದಿಗಳಾಗಿ ನಮ್ಮ ಸಮಾಜ ಮಾರ್ಪಟ್ಟಿದ್ದೆ.
ಇತ್ತಿಚಿಗಷ್ಟೆ ಕೊಲ್ಕತ್ತಾದಲ್ಲಿ ನಡೆದ ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಇಡೀ ದೇಶ ಮಾತ್ರವಲ್ಲ ವಿಶ್ವವೇ ಮಾತಾಡುವಂತಾಗಿತ್ತು, ಬೇರೆ ಹೆಣ್ಣು ಮಗುವಿನ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ನಾವು ನಮ್ಮ ಮನೆಯಲ್ಲಿ ನಾವು ಹೆಣ್ಣಿಗೆ ಏನು ಗೌರವ ಕೊಡುತ್ತಿದ್ದೇವೆ ಎಂದು ಚಿಂತಿಸಬೇಕಾಗುತ್ತೆ.
ಹಾಗಾದರೆ ನಾವು ಹೆಣ್ಣಿಗೆ ನಿಜವಾಗಿಯೂ ಕೊಡುವ ಗೌರವವೆಂದರೆ ಏನು..?
ನನ್ನ ಮನೆಯಲ್ಲಿ ನನ್ನ ಸಹೋದರಿ / ತಾಯಿ / ಪತ್ನಿ, ಯಾರೇ ಅಗಿರಲಿ ಅವರ ಕೆಲಸಗಳಲ್ಲಿ ಭಾಗಿಯಾಗುವುದು, ಅವಳ ಇಷ್ಟ, ಕಷ್ಟಗಳನ್ನು ತಿಳಿದುಕೊಳ್ಳುವುದು, ಅವಳಿಗಾಗಿ ಸಮಯ ಕೊಡುವುದು, ಪ್ರೀತಿಯ ಮಾತುಗಳನ್ನ ಆಡುವುದು, ಮುಖ್ಯವಾಗಿ ಅವಳ ಋತುವಿನ ಸಮಯದಲ್ಲಿ ಅವಳಿಗೆ ಧೈರ್ಯವಾಗಿ ನಿಲ್ಲುವುದು, ಆರೈಕೆ ತೋರಿಸುವುದು.
ಪತಿಯರು ಮುಖ್ಯವಾಗಿ ತನ್ನನ್ನೇ ನಂಬಿ, ಅವಳ ಎಷ್ಟೋ ಸಂಬಂಧಗಳನ್ನು ಬಿಟ್ಟು ನಿನ್ನ ನಂಬಿ ಬಂದಿರುತ್ತಾಳೆ, ಅವಳನ್ನ ನಾನು ಹೇಗೆ ಕಾಪಾಡುತ್ತೇನೆ ಎಂಬುದುವುದು ಮುಖ್ಯವಲ್ಲವೇ, ಮದುವೆಗೆ ಮುನ್ನ ತಂದೆ ತಾಯಿ, ಸ್ನೇಹಿತರು ಎಂದು ತನ್ನದೇ ಆದ ಕನಸುಗಳನ್ನು ಕಟ್ಟಿಕೊಂಡವಳು ಮದುವೆಯಾದ ಮೇಲೆ ತನ್ನ ಗಂಡನ ಸೆರೆಮನೆಯಲ್ಲಿ ಸೆರೆಯಾಗಬಾರದು ಅಲ್ಲವೇ..? ಅವಳಿಗೆ ಎಷ್ಟು ಸ್ವಾತಂತ್ರ್ಯ ಕೊಟ್ಟಿದ್ದೇನೆ, ಅವಳ ಇಷ್ಟ ಕಷ್ಟಗಳನ್ನ ನಾನು ಎಷ್ಟು ತಿಳಿದಿದ್ದೇನೆ, ಅದಕ್ಕೆ ನಾನು ಏನು ಕೊಡುಗೆ ನೀಡುತ್ತಿದ್ದೇನೆ ಎಂಬ ಪ್ರಶ್ನೆಯನ್ನ ನಮಗೆ ನಾವೇ ಮಾಡಿಕೊಳ್ಳಬೇಕಾಗುತ್ತದೆ. ಮಕ್ಕಳ ಮುಂದೆಯೇ ಪತ್ನಿಯ ಜೊತೆ ಖಾರವಾಗಿ ಮಾತನಾಡಿದರೆ ಅವರು ಅದನ್ನೇ ಕಳಿಯುತ್ತಾರೆ ಎಂಬುದನ್ನ ಮರೆಯಬಾರದು.
ಎಲ್ಲರೂ ಹೀಗೆ ಎಂದು ಹೇಳುತ್ತಿಲ್ಲ, ಪ್ರತಿದಿನ ಹೆಣ್ಣಿನ ಶೋಷಣೆಯ ಸುದ್ದಿಗಳನ್ನ ಕೇಳಿ ಮನಸ್ಸಿನಲ್ಲಿರುವ ಮಾತುಗಳನ್ನ ಹೊರಹಾಕಿದ್ದೇನೆ, ನನ್ನ ಪ್ರಕಾರ ಒಬ್ಬ ಹೆಣ್ಣಿಗೆ ನಾವು ನಿಜವಾಗಿಯೂ ಕೊಡುವ ಗೌರವ ಅವಳನ್ನ ಅರ್ಥಮಾಡಿಕೊಳ್ಳುವುದು, ಅವಳು ಭಾವನೆಗಳಿಗೆ ಸ್ಪಂದಿಸುವುದು. ನಮ್ಮ ಒತ್ತಡಗಳು ಏನೇ ಇರಲಿ ಅದನ್ನ ತೋರಿಸುವುದು ಅವಳ ಮೇಲಲ್ಲ, ಯಾರಿಗೇ ಆದರು ಅಷ್ಟೆ ನೋವಾದಾಗ ಹೇಳುವುದು ಅಮ್ಮ ಎಂದೇ.
ನಮ್ಮ ಮನೆಯಲ್ಲಿ ಹೆಣ್ಣನ ಗೌರವಿಸೋಣ, ನಮ್ಮ ಮುಂದಿನ ಪೀಳಿಗೆಗೆ ಹೆಣ್ಣಿಗೆ ಗೌರವ ಕೊಡುವುದನ್ನ ಕಲಿಸೋಣ