ಮಂಗಳೂರು: ಪ್ರಚೋದನಕಾರಿ ಪೋಸ್ಟ್ ಶೇರ್ ಮಾಡಿದ ಆರೋಪದ ಹಿನ್ನಲೆ ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ರನ್ನ ಮಂಗಳೂರಿನ ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ RSS ಮುಖಂಡರ ಭಾಷಣದ ತುಣುಕನ್ನು ಶರಣ್ ಪಂಪ್ವೆಲ್ ಶೇರ್ ಮಾಡಿದ್ದರು. ಈ ಹಿನ್ನಲೆ ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ವಿಕಾಸ್ ಪುತ್ತೂರು ಮತ್ತು ಶರಣ್ ಪಂಪ್ವೆಲ್ ವಿರುದ್ಧ FIR ದಾಖಲಿಸಿದ್ದಾರೆ.
ಶೇರ್ ಮಾಡಲಾದ ಭಾಷಣದ ತುಣುಕಲ್ಲಿ ಏನಿದೆ?
ಕಳೆದ ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಮಕ್ಕಳು ಹುಟ್ಟಿದರು ಎಂದು ನಾನೊಂದು ಲೆಕ್ಕ ತೆಗಿದಿದ್ದೇನೆ. 45,700 ಮಕ್ಕಳು ಹುಟ್ಟಿದ್ದು, ಆ ಪೈಕಿ 23,200 ಮಕ್ಕಳು ಹಿಂದೂಗಳು. 22,200 ಮಕ್ಕಳು ಅಲ್ಪಸಂಖ್ಯಾತರ ಮಕ್ಕಳು. ನಮ್ಮ ಜಿಲ್ಲೆಯ ಶೇ. 78 ಜನಸಂಖ್ಯೆಗೆ ಹುಟ್ಟಿದ ಮಕ್ಕಳು 23,000, ಆದರೆ ಶೇ. 28ರಷ್ಟಿರುವವ ಸಮುದಾಯಕ್ಕೆ ಹುಟ್ಟಿದ್ದು 22,000. ಹೀಗಾದ್ರೆ ಇನ್ನೊಂದು 15 ವರ್ಷಗಳಲ್ಲಿ ನಮ್ಮ ಊರು ಎಲ್ಲಿ ಹೋಗುತ್ತೆ? ಆಗ ದೇಶ, ಸಮಾಜ ಉಳಿಯಲು ಸಾಧ್ಯವಾ? ಎಂದು ಆರೆಸ್ಸೆಸ್ ಮುಖಂಡರು ಪ್ರಶ್ನಿಸಿರೋದು ವಿಡಿಯೋ ತುಣುಕಿನಲ್ಲಿದೆ.
ಶರಣ್ ಪಂಪ್ವೆಲ್ ಆಕ್ರೋಶ
ತಮ್ಮನ್ನು ವಶಕ್ಕೆ ಪಡೆದ ಬಗ್ಗೆ ಕದ್ರಿ ಪೊಲೀಸ್ ಠಾಣೆ ಮುಂಭಾಗ ಶರಣ್ ಪಂಪ್ವೆಲ್ ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಮುಖಂಡನಾಗಿ ಸಮಾಜದ ಆಗು ಹೋಗುಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದೆ. ನೋಟಿಸ್ ಕೊಟ್ಟು ಅರೆಸ್ಟ್ ಮಾಡುವ ಬದಲು ಬೇರೆ ವರ್ತನೆ ತೋರಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಳ್ಳುವ ಪ್ರಯತ್ನಕ್ಕೆ ಸರಕಾರ ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಸದ್ಯ ಶರಣ್ ಪಂಪ್ವೆಲ್ಗೆ ನೋಟಿಸ್ ನೀಡಿ ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಮಿಥುನ್ ಎದುರು ಹಾಜರುಪಡಿಸಲಾಗಿದೆ. ಮುಚ್ಚಳಿಕೆ ನೀಡಿದ ಬಳಿಕ ಅವರನ್ನು ಬಿಟ್ಟು ಕಳುಹಿಸುವ ಸಾಧ್ಯತೆ ಇದೆ.
ಠಾಣೆ ಬಳಿ ಜಮಾಯಿಸಿದ್ದ ಕಾರ್ಯಕರ್ತರು
ಶರಣ್ ಪಂಪ್ವೆಲ್ ವಶಕ್ಕೆ ಪಡೆದ ಬೆನ್ನಲ್ಲೇ, ನೋಟಿಸ್ ನೀಡದೆ ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿ ಕದ್ರಿ ಪೊಲೀಸ್ ಠಾಣೆ ಬಳಿ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದರು. ಆ ವಿಡಿಯೋವನ್ನು ತುಂಬಾ ಜನರು ಶೇರ್ ಮಾಡಿದ್ದಾರೆ. ಹೀಗಿರುವಾಗ ಶರಣ್ ಪಂಪ್ವೆಲ್ ಅವರನ್ನೇ ವಶಕ್ಕೆ ಪಡೆದಿರೋದು ಯಾಕೆ? ಅವರು ಹಿಂದೂ ಸಂಘಟನೆ ಮುಖಂಡ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ತಕ್ಷಣ ಕೇಸ್ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
For More Updates Join our WhatsApp Group :

