ಬೆಂಗಳೂರು : ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಟ ದರ್ಶನ್ಗೆ ರಾಜಾತಿಥ್ಯ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಸುಮಲತಾ ಅಂಬರೀಷ್ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಈ ವಿಚಾರವಾಗಿ ಮಾತನಾಡಿರುವ ಸುಮಲತಾ, ಇದು ಕೇವಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾತ್ರ ನಡೆಯುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ.
ಎಲ್ಲ ಜೈಲುಗಳಲ್ಲಿ ನಡೆಯುತ್ತಿರುವುದು ಇದೇ ಎಂದಿದ್ದಾರೆ.
ಮಾಧ್ಯಮಗಳು ಪ್ರತಿ ಜೈಲಿಗೂ ಹೋಗಿ ಈ ವಿಚಾರಗಳನ್ನು ಬಯಲಿಗೆ ತನ್ನಿ ಎಂದು ಹೇಳಿದ್ದಾರೆ. ಕೇವಲ ಕರ್ನಾಟಕವಲ್ಲ, ಇಡೀ ದೇಶದಲ್ಲಿ, ಯಾಕೆ ಪ್ರಪಂಚದ ಯಾವ ಜೈಲಿಗೆ ಹೋದರೂ ಅಲ್ಲಿ ಕೈದಿಗಳಿಗೆ ಮೊಬೈಲ್, ಡ್ರಗ್ಸ್, ಸಿಗರೇಟ್ ಸೇರಿದಂತೆ ಎಲ್ಲವೂ ಸಿಗುತ್ತದೆ. ಹಾಗಂತ ಇದು ಒಳ್ಳೆಯದು ಎಂದು ನಾನು ಹೇಳುತ್ತಿಲ್ಲ. ಇದು ಕೂಡ ಭ್ರಷ್ಟಾಚಾರ, ಕಾನೂನಿಗೆ ವಿರುದ್ಧವಾದದ್ದು. ಇದು ಇಡೀ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ. ಆದರೆ, ಒಂದು ವ್ಯಕ್ತಿಯನ್ನು ಮಾತ್ರ ಈ ವಿಚಾರದಲ್ಲಿ ಹೈಲೈಟ್ ಮಾಡುತ್ತಿರುವುದು ಸರಿಯಲ್ಲ ಎಂದು ನಟ ದರ್ಶನ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಜೈಲಿನಲ್ಲಿ ನಡೆದಿರುವುದು ಸರಿ ಎಂದು ನಾನೂ ಹೇಳಲ್ಲ. ಇದೇ ಕಾರಣಕ್ಕೆ ಅಧಿಕಾರಿಗಳನ್ನು ಸಸ್ಪೆಂಡ್ ಕೂಡ ಮಾಡಿದ್ದಾರಲ್ಲ? ಜೈಲಿನಲ್ಲಿ ಈ ರೀತಿಯ ವ್ಯವಸ್ಥೆಗಳಿಗೆ ಕ್ರಮ ತೆಗೆದುಕೊಳ್ಳಲೇಬೇಕಾಗಿತ್ತು. ಆ ಕೆಲಸ ನಡೆದಿದೆ ಎಂದೂ ಸುಮಲತಾ ಹೇಳಿದ್ದಾರೆ. ಜೈಲಿನಲ್ಲಿ ಹಣ ಕೊಟ್ಟರೆ ಎಲ್ಲ ವ್ಯವಸ್ಥೆ ಸಿಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಿಂದೆ ಜೈಲಿನ ಮುಖ್ಯಾಧಿಕಾರಿಯಾಗಿದ್ದ ರೂಪಾ ಅವರೂ ಈ ವಿಚಾರದ ಬಗ್ಗೆ ಧ್ವನಿ ಎತ್ತಿದ್ದರು. ಆಗ ಈ ವಿಚಾರ ದೊಡ್ಡ ಸುದ್ದಿಯಾಗಲಿಲ್ಲ. ಈಗ ದರ್ಶನ್ ವಿಚಾರವಾಗಿ ಇದನ್ನೇ ಹೈಪ್ ಮಾಡಲಾಗುತ್ತಿದೆ.
ಜೈಲಲ್ಲಿ ಜೊತೆಗೆ ಸಿಗೋದೇ ಕ್ರಿಮಿನಲ್ಗಳು: ಫೋಟೋದಲ್ಲಿ ದರ್ಶನ್ ಕುಖ್ಯಾತ ರೌಡಿಗಳೊಂದಿಗೆ ಕುಳಿತು ಸಿಗರೇಟ್ ಸೇದುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಜೈಲಲ್ಲಿ ಯಾರಪ್ಪಾ ಇರ್ತಾರೆ? ಜೈಲಿನಲ್ಲಿ ಇರೋದೇ ಕ್ರಿಮಿನಲ್ಗಳು. ಅಲ್ಲಿ ಇನ್ಯಾರು ಸಿಗುತ್ತಾರೆ? ಅಲ್ಲಿ ಜೊತೆಯಲ್ಲಿ ಸಿಕ್ಕವರ ಜೊತೆ ಮಾತನಾಡದೆ ಇನ್ಯಾರ ಜೊತೆಗೆ ಮಾತನಾಡಲು ಸಾಧ್ಯ? ಎಂದು ನಟ ದರ್ಶನ್ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ. ದರ್ಶನ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಿರಾ? ಎಂದು ಕೇಳಿದ್ದಕ್ಕೆ, ಇದು ನಮ್ಮ ಪರ್ಸನಲ್ ವಿಚಾರ. ಇದನ್ನು ಎಲ್ಲರ ಮುಂದೆ ಮಾತನಾಡಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ.
ನಟ ದರ್ಶನ್ ಹಾಗೂ ರೆಬೆಲ್ ಸ್ಟಾರ್ ಅಂಬರೀಷ್ ಕುಟುಂಬದ ಜೊತೆ ತುಂಬಾ ಒಡನಾಟವಿತ್ತು. ದರ್ಶನ್ ಅವರು ಸುಮಲತಾ ಅವರನ್ನು ಮದರ್ ಇಂಡಿಯಾ ಎಂದು ಕರೆಯುತ್ತಿದ್ದರು. ಸುಮಲತಾ ಕೂಡ ದರ್ಶನ್ ಅವರನ್ನು ತನ್ನ ಮಗ ಎಂದು ಹೇಳಿಕೊಳ್ಳುತ್ತಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿದ ಮೇಲೆ ಸುಮಲತಾ ಪುತ್ರ ನಟ ಅಭಿಷೇಕ್ ಅಂಬರೀಷ್ ಕೂಡ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ದರ್ಶನ್ರನ್ನ ಭೇಟಿಯಾಗಿ ಬಂದಿದ್ದರು.