ಬೆಂಗಳೂರು: “ಹೆಚ್ಚುವರಿ ಡಿಸಿಎಂ ಹುದ್ದೆಯ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡುವವರು ಹೈಕಮಾಂಡ್ ಬಳಿ ಮಾತನಾಡಿ, ಪರಿಹಾರ ತರಲಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕೆಂಪೇಗೌಡರ ಜಯಂತಿ ಅಂಗವಾಗಿ ವಿಧಾನಸೌಧ ಮುಂಭಾಗ ಇರುವ ಕೆಂಪೇಗೌಡರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಡಿಸಿಎಂ ಹುದ್ದೆ ಸೃಷ್ಟಿ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿ, “ಮಾಧ್ಯಮಗಳ ಮುಂದೆ ಮಾತನಾಡುವವರು ಹೈಕಮಾಂಡ್ ಮುಂದೆ ಮಾತನಾಡಲಿ. ಏನು ಬೇಕಾದರೂ ಪರಿಹಾರ ಪಡೆದುಕೊಂಡು ಬರಲಿ. ಮಾಧ್ಯಮದ ಮುಂದೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಮಾಧ್ಯಮದವರು ಪರಿಹಾರ ಕೊಡುವುದಿಲ್ಲ. ಮಾಧ್ಯಮದವರು ಪ್ರಚಾರ ಕೊಡುತ್ತೀರ ಅಷ್ಟೇ. ಏನೇ ಇದ್ದರೂ ಹೈಕಮಾಂಡ್ ಮುಂದೆ ಹೋಗಿ ಮಾತನಾಡಿ ಪರಿಹಾರ ತೆಗೆದುಕೊಂಡು ಬರಲಿ” ಎಂದು ತಿರುಗೇಟು ನೀಡಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಒತ್ತಾಯ ಸಂಬಂಧ ಪ್ರತಿಕ್ರಿಯಿಸಿ, ಬಹಳ ಸಂತೋಷ, ಟೈಮ್ ವೇಸ್ಟ್ ಮಾಡಬಾರದು. ಏನೇನು ಬೇಕು ಹೈಕಮಾಂಡ್ ಮುಂದೆ ಹೋಗಿ ಪರಿಹಾರ ಪಡೆಯಲಿ. ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಹೋಗಿ ಪರಿಹಾರ ಪಡೆಯಲಿ. ಡಾಕ್ಟರ್ ಬಳಿ ಹೋದರೆ ಔಷಧಿ ಕೊಡುತ್ತಾರೆ. ಲಾಯರ್ ಬಳಿ ಹೋದರೆ ನ್ಯಾಯ, ಪರಿಹಾರ ಕೊಡುತ್ತಾರೆ. ಎಲ್ಲೆಲ್ಲಿ ಹೋಗಬೇಕು ಅಲ್ಲಿಗೆ ಹುಡುಕಿಕೊಂಡು ಹೋಗಲಿ. ಯಾರು ಬೇಕಾದರು ಹೋಗಲಿ. ನನ್ನದೇನು ಅಭ್ಯಂತರ ಇಲ್ಲ” ಎಂದರು