ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗರ್ಭಿಣಿಯರ ಆರೋಗ್ಯ ಸುರಕ್ಷತೆಗಾಗಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರ ಆಲೋಚನೆಯಲ್ಲಿ ಮೂಡಿಬಂದ, ವಿನೂತನ ಗರ್ಭಿಣಿಯರ ಆರೋಗ್ಯದ ಕಾಳಜಿಯನ್ನು ದತ್ತು ನೀಡುವ ಯೋಜನೆಗೆ ಅಭೂತಪೂರ್ವ ಯಶಸ್ಸು ದೊರೆತಿದೆ. ಈ ಯೋಜನೆಯಡಿ ಗುರುತಿಸಲಾಗಿದ್ದ ಎಲ್ಲ ಗರ್ಭಿಣಿಯರಿಗೆ ಸುರಕ್ಷಿತವಾಗಿ ಹೆರಿಗೆಯಾಗಿದ್ದು, ಯಾವುದೇ ತಾಯಿ – ಮಗುವಿನ ಮರಣ ಸಂಭವಿಸಿಲ್ಲ.
2023ರ ಸೆಪ್ಟಂಬರ್ನಲ್ಲಿ ಆರಂಭಿಸಿದ ಈ ಯೋಜನೆಯಡಿ ಆರೋಗ್ಯ ಇಲಾಖೆಯ ಆರ್.ಸಿ.ಹೆಚ್. ತಂತ್ರಾಂಶದಲ್ಲಿ ದಾಖಲಾದ 358 ಗರ್ಭಿಣಿಯರಿಗೆ, ಅವರಿಗೆ ದೊರೆಯಬೇಕಾದ ಆರೋಗ್ಯ ಸೇವೆಗಳನ್ನು ಸಕಾಲದಲ್ಲಿ ಒದಗಿಸಲಾಗಿದೆ. ಸುರಕ್ಷಿತ, ಆರೋಗ್ಯವಂತ ಶಿಶುವಿಗೆ ಜನ್ಮ ನೀಡುವವರೆಗೆ ನಿರಂತರ ಅನುಸರಣೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ತಲಾ ಒಬ್ಬ ಮಹಿಳೆಯ ಯೋಗಕ್ಷೇಮದ ವಿಚಾರಣೆಯ ದತ್ತು ನೀಡಲಾಗಿತ್ತು.
ಈ ಯೋಜನೆಯಡಿ ಗುರುತಿಸಿದವರಲ್ಲಿ ಮೇ 2024ರ ವೇಳೆಗೆ 345 ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಆಗಿದ್ದು, ತಾಯಿ – ಮಗು ಇಬ್ಬರೂ ಸಂಪೂರ್ಣ ಆರೋಗ್ಯವಾಗಿದ್ದಾರೆ. ವಿವಿಧ ಆರೋಗ್ಯ ಸಮಸ್ಯೆಗಳಿಂದ 13 ಮಹಿಳೆಯರಿಗೆ ಗರ್ಭಪಾತವಾಗಿದೆ. ಸುರಕ್ಷಿತ ಹೆರಿಗೆಯಾಗಿರುವ ಮಹಿಳೆಯರಲ್ಲಿ 121 ಮಂದಿಗೆ ಸಿ ಸೆಕ್ಷನ್ ಹೆರಿಗೆಯಾಗಿದ್ದರೆ, 224 ಮಂದಿಗೆ ಸಾಮಾನ್ಯ ಹೆರಿಗೆಯಾಗಿರುವುದು ಗಮನಾರ್ಹವಾಗಿದೆ.