ಹಾಸನ: 370ನೇ ವಿಧಿ ರದ್ದುಪಡಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ಎಂದು ಮಾಜಿ ಪ್ರಧಾನಮಂತ್ರಿ ಹೆಚ್‌ಡಿ ದೇವೇಗೌಡ ಅವರು ಶನಿವಾರ ಹೇಳಿದರು.
ಶ್ರಾವಣ ಶನಿವಾರದ ನಿಮಿತ್ತ ದೇವೇಗೌಡ ಅವರು ಮಾವಿನಕೆರೆ ಬೆಟ್ಟದಲ್ಲಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 370ನೇ ವಿಧಿ ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಜನರು ಶಾಂತಿಯುತ ಜೀವನವನ್ನು ನಡೆಸುತ್ತಿದ್ದಾರೆ ಮತ್ತು ಯಾವುದೇ ಭಯವಿಲ್ಲದೆ ಬೀದಿಗಳಲ್ಲಿ ಮುಕ್ತವಾಗಿ ಓಡಾಡುತ್ತಿದ್ದಾರೆಂದು ಹೇಳಿದರು.
ಇದೇ ವೇಳೆ ಈ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೊಂಡಾಡಿದರು. ಪ್ರಧಾನಿ ಮೋದಿಯವರು 370 ಆರ್ಟಿಕಲ್ ರದ್ದು ಮಾಡಿದ್ದಾರೆ. ಮೋದಿಯವರು ಪ್ರಧಾನಿಯಾದ ಮೇಲೆ ಉಗ್ರರನ್ನು ನಿಯಂತ್ರಿಸಿದ್ದಾರೆ. ಕಾಶ್ಮೀರದಲ್ಲಿ ಮೊದಲಿದ್ದಂತೆ ಆತಂಕದ ವಾತಾವರಣ ಇಲ್ಲ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ನೋಡಬಹುದಾಗಿದೆ.
ಕಾಶ್ಮೀರ ವಿಚಾರದಲ್ಲಿ ಪ್ರಧಾನಿ ಮೋದಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿಂದೆ ನಡೆಯುತ್ತಿದ್ದ ಅಕ್ರಮವನ್ನು ಸ್ವಲ್ಪಮಟ್ಟಿಗೆ ಸುಧಾರಣೆ ಮಾಡಿದ್ದಾರೆ. ಅದರ ಪರಿಣಾಮ ಇಂದು ಸಾಮಾನ್ಯ ಜನ ಬೀದಿಯಲ್ಲಿ ನೆಮ್ಮದಿಯಿಂದ ಓಡಾಡುತ್ತಿದ್ದಾರೆ. ಇದೀಗ ಅಲ್ಲಿ ಚುನಾವಣೆ ನಡೆಯುತ್ತಿದೆ. ಓಟು ಯಾರಿಗೆ ಹಾಕ್ತಾರೋ ಬಿಡ್ತರೋ ಕೇಳಬಾರದು. ಆದರೆ, ಮೋದಿಯವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅಲ್ಲಿನ ಜನರು ಮೋದಿ ಪ್ರಧಾನಿಯಾದ ಬಳಿಕ ನೆಮ್ಮದಿಯಿಂದ ಇದ್ದಾರೆ. ಹೀಗಾಗಿ ಮೋದಿಯವರನ್ನ ಬೆಂಬಲಿಸುತ್ತಾರೆ ಎಂದು ತಿಳಿಸಿದರು.