ನವದೆಹಲಿ: ಅರವಿಂದ್ ಕೇಜ್ರಿವಾಲ್ ಉತ್ತರಾಧಿಕಾರಿಯಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಆತಿಶಿ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕೇಜ್ರಿವಾಲ್ ಅವರ ಆಪ್ತ ಮತ್ತು ನಂಬಿಕಸ್ಥ ಬಳಗವಾಗಿದ್ದ ಆತಿಶಿ ದೆಹಲಿ ಸರ್ಕಾರದ ಏಕೈಕ ಮಹಿಳಾ ಸಚಿವೆಯಾಗಿದ್ದರು, ಈ ಮುನ್ನಾ ಶಿಕ್ಷಣ, ಇಂಧನ, ಪಿಡಬ್ಲೂಡಿ ಸೇರಿದಂತೆ ಹಲವು ಪ್ರಬಲ ಖಾತೆಗಳನ್ನು ಇವರು ಹೊಂದಿದ್ದಾರೆ.
ವರದಿಗಳ ಪ್ರಕಾರ ಸೋಮವಾರ ರಾತ್ರಿ ಕೇಜ್ರಿವಾಲ್ ನಿವಾಸದಲ್ಲಿ ನಡೆದ ಎಎಪಿಯ ರಾಜಕೀಯ ವ್ಯವಹಾರ ಸಮಿತಿ (ಪ್ಯಾಕ್) ಸಭೆಯಲ್ಲಿ ಆತಿಶಿ ಹೆಸರು ಪ್ರಸ್ತಾಪಿಸಲಾಗಿದ್ದು, ಪಕ್ಷದ ಸದಸ್ಯರು ಸಹಮತ ಸೂಚಿಸಿದ್ದರು. ಅಬಕಾರಿ ನೀತಿ ಹಗರಣದಲ್ಲಿ ಸಿಲುಕಿ ಷರತ್ತುಬದ್ದ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿರುವ ಕೇಜ್ರಿವಾಲ್ ಶುಕ್ರವಾರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಘೋಷಿಸಿದ್ದರು. ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದು ಸಿಎಂ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.