ಬೆಂಗಳೂರು : ಪೌರ ಕಾರ್ಮಿಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ವಾರದಲ್ಲಿ ಒಂದು ದಿನ ರಜೆ ಘೋಷಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪ್ರಸ್ತುತ ವಾರಕ್ಕೆ ಎರಡು ಭಾರಿ ಅರ್ಧ ದಿನ ರಜೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ, ಈ ಕೆಳಕಂಡ ಷರತ್ತುಗಳನ್ನು ಪೂರೈಸಿಕೊಂಡು, ವಾರದಲ್ಲಿ ಪೂರ್ತಿ ಒಂದು ದಿನ ರಜೆ ಘೋಷಿಸಲು ಸರ್ಕಾರದ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.
ನಿಬಂಧನೆಗಳು
1. ದಿನನಿತ್ಯದ ಸ್ವಚ್ಛತಾ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ ಶೇ.85% ರಷ್ಟು ಹಾಜರಾತಿ ಖಚಿತಪಡಿಸಿಕೊಂಡು ಒಂದು ರಜೆ ನೀಡಲು ತಿಳಿಸಿದೆ.
2. ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಸ್ವಚ್ಛತಾ ಕಾರ್ಯಕ್ಕೆ ಈಗಾಗಲೇ ನೇಮಿಸಿರುವ ಸಿಬ್ಬಂದಿಗೆ ವಾರದ ರಜೆ ನೀಡುವ ಸಂದರ್ಭದಲ್ಲಿ ಬೇರೊಬ್ಬ ನೌಕರರನ್ನು ಸದರಿ ಕಾರ್ಯಕ್ಕೆ ನಿಯೋಜಿಸುವ ಮೇರೆಗೆ ರಜೆಯ ಅವಶ್ಯಕತೆಯಿರುವ ಪೌರಕಾರ್ಮಿಕರಿಗೆ ವಾರದಲ್ಲಿ ಒಂದು ದಿನ ರಜೆ ನೀಡಲು ಅವಕಾಶ ಕಲ್ಪಿಸಬಹುದು.
3. ವಾರದ ರಜೆಯನ್ನು ನೌಕರರು / ಪೌರ ಕಾರ್ಮಿಕರ ಹಕ್ಕು ಎಂದು ಪರಿಗಣಿಸತಕ್ಕದ್ದಲ್ಲ ಹಾಗೂ ಒಂದು ವಾರದ ಒಂದು ರಜೆಯನ್ನು ಮುಂದಿನ ವಾರಕ್ಕೆ ಹಿಂಬಾಕಿ ಎಂದು ಪರಿಗಣಿಸಿ ಸತತವಾಗಿ ರಜೆ ಪಡೆಯಲು ಅವಕಾಶವಿರುವುದಿಲ್ಲ.
4. ಪಕೃತಿ ವಿಕೋಪ, ಸ್ಥಳೀಯ ಜಾತ್ರೆ, ಸಭೆ ಸಮಾರಂಭಗಳ ವಿಶೇಷ ಸಂದರ್ಭಗಳಲ್ಲಿ ವಾರದ ರಜೆಯನ್ನು ಕಡ್ಡಾಯವಾಗಿ ನೀಡಬೇಕೆಂದು ಒತ್ತಾಯಿಸುವಂತಿಲ್ಲ ಹಾಗೂ ಈ ಸಂದರ್ಭದಲ್ಲಿ ವಾರದ ರಜೆ ನೀಡುವ ಅಧಿಕಾರ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ವಿವೇಚನೆಗೆ ಒಳಪಟ್ಟಿರುತ್ತದೆ.
5. ರಜೆಯ ಮೇಲೆ ತೆರಳಿದ ನೌಕರ / ಪೌರ ಕಾರ್ಮಿಕರ ವ್ಯಾಪ್ತಿಗೆ ಸೇರಿದ ಪ್ರದೇಶದ (Area) ಸ್ವಚ್ಛತಾ ಕಾರ್ಯವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಜರಾಗಿರುವ ಇತರೆ ಸಿಬ್ಬಂದಿಯಿಂದ ಸ್ವಚ್ಛಗೊಳಿಸತಕ್ಕದ್ದು.