ಕೆಂಪೇಗೌಡ ಏರ್ಪೋರ್ಟ್‌ಗೆ ಮತ್ತೊಂದು ಗರಿಮೆ: 3ನೇ ಬಾರಿ ಜಾಗತಿಕ ಪ್ರಶಸ್ತಿ.

ಕೆಂಪೇಗೌಡ ಏರ್ಪೋರ್ಟ್‌ಗೆ ಮತ್ತೊಂದು ಗರಿಮೆ: 3ನೇ ಬಾರಿ ಜಾಗತಿಕ ಪ್ರಶಸ್ತಿ.

ಕೆಂಪೇಗೌಡ ಏರ್​ಪೋರ್ಟ್​​ಗೆ 3ನೇ ಬಾರಿಗೆ ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  ಮತ್ತೊಂದು ಗರಿಮೆಯನ್ನು ಮುಡಿಗೇರಿಸಿಕೊಂಡಿದೆ. ಕೆಂಪೇಗೌಡ  ಏರ್​ಪೋರ್ಟ್​ ಬೆಂಗಳೂರು ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ 2026ರಲ್ಲಿ ಸತತ ಮೂರನೇ ಬಾರಿಗೆ ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ’ ಎಂದು ಗುರುತಿಸಲ್ಪಟ್ಟಿದೆ.

ಈ ಮನ್ನಣೆಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಪ್ರಮುಖ ಪ್ರಯಾಣ ಕೇಂದ್ರಗಳಲ್ಲಿ ಒಂದಾಗಿರುವುದನ್ನು ಪುನರುಚ್ಚರಿಸುತ್ತದೆ. ಜಾಗತಿಕ ಮಟ್ಟದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವಿಶ್ವ ವಿಮಾನ ನಿಲ್ದಾಣಗಳ ಶ್ರೇಯಾಂಕದಲ್ಲಿ 48ನೇ ಸ್ಥಾನದಿಂದ 41ನೇ ಸ್ಥಾನ ಪಡೆದಿದೆ. ಆ ಮೂಲಕ ವಿಶ್ವದ ಅಗ್ರ 50 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದರ ಜೊತೆಗೆ, ಪ್ರಯಾಣಿಕರಿಗೆ ವಿಶ್ವದರ್ಜೆಯ ಅನುಭವವನ್ನು ನೀಡುವ ಬದ್ಧತೆಯನ್ನು ಎತ್ತಿಹಿಡಿದಿದೆ.

ವಿಮಾನ ನಿಲ್ದಾಣದ ಶ್ರೇಷ್ಠತೆಗೆ ಜಾಗತಿಕ ಮಾನದಂಡವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ‘ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್’, ಚೆಕ್-ಇನ್, ಆಗಮನ, ವರ್ಗಾವಣೆ, ಚಿಲ್ಲರೆ ವ್ಯಾಪಾರ, ಭದ್ರತೆ, ವಲಸೆ ಮತ್ತು ನಿರ್ಗಮನ ಸೇರಿದಂತೆ ಪ್ರಮುಖ ಅಂಶಗಳಲ್ಲಿ ಅತ್ಯುತ್ತಮ ಗ್ರಾಹಕ ಅನುಭವವನ್ನು ನೀಡುವ ವಿಮಾನ ನಿಲ್ದಾಣಗಳನ್ನು ಗುರುತಿಸುತ್ತದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಿರವಾದ ಕಾರ್ಯಕ್ಷಮತೆಯನ್ನು ಆಧರಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಕೆಂಪೇಗೌಡ ಏರ್​ಪೋರ್ಟ್ ಇತ್ತೀಚಿನ ದಿನಗಳಲ್ಲಿ ಸತತವಾಗಿ ಜಾಗತಿಕ ಮನ್ನಣೆಗಳನ್ನು ಪಡೆಯುತ್ತಿದ್ದು, ನಾಲ್ಕನೇ ಬಾರಿಗೆ ‘ವಿಶ್ವದ ಅತ್ಯುತ್ತಮ ಆಗಮನದ ವಿಮಾನ ನಿಲ್ದಾಣ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರೊಂದಿಗೆ, ಟರ್ಮಿನಲ್ 2 ಸ್ಕೈಟ್ರಾಕ್ಸ್‌ನಿಂದ ‘5-ಸ್ಟಾರ್’ ರೇಟಿಂಗ್ ಪಡೆದ ಭಾರತದ ಮೊದಲ ಟರ್ಮಿನಲ್ ಎಂಬ ದಾಖಲೆ ಬರೆದಿದೆ. ಹಾಗೆಯೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿಯಿಂದ ವಿಮಾನ ನಿಲ್ದಾಣ ಕಾರ್ಬನ್ ಮಾನ್ಯತೆ ಕಾರ್ಯಕ್ರಮದಡಿ ಅತ್ಯುನ್ನತ ಮಟ್ಟದ 5ನೇ ಹಂತವನ್ನು ಮತ್ತು ಪ್ರವೇಶ ಸಾಧ್ಯತೆ ಮಾನ್ಯತೆಯ ಅಡಿಯಲ್ಲಿ 3ನೇ ಹಂತವನ್ನು ಸಾಧಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *